ಹೈಕಮಾಂಡ್ ವಹಿಸುವ ಜವಾಬ್ದಾರಿ ನಿರ್ವಹಣೆ: ಸಚಿವ ಸಿ.ಎಸ್.ಶಿವಳ್ಳಿ

Update: 2018-12-28 16:38 GMT

ಹುಬ್ಬಳ್ಳಿ, ಡಿ.28: ನನಗೆ ಇಂತಹ ಖಾತೆಯೇ ಬೇಕು ಎಂದು ಪಕ್ಷದ ವರಿಷ್ಠರಿಗೆ ಎಂದಿಗೂ ಕೇಳಿಲ್ಲ. ಅವರು ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ನನ್ನಲ್ಲಿದೆ ಎಂದು ನೂತನ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪೌರಾಡಳಿತ ಖಾತೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಅಧಿಕೃತವಾಗಿ ನನಗೆ ಯಾವುದೇ ಪತ್ರ ಕೈ ಸೇರಿಲ್ಲ ಎಂದರು.

ಪೌರಾಡಳಿತದಲ್ಲಿ ಪಟ್ಟಣ ಪಂ., ನಗರಸಭೆ, ಪುರಸಭೆ ಹಾಗೂ ಮುನಿಸಿಪಾಲಿಟಿಗಳು ಒಳಗೊಂಡಿರುತ್ತವೆ. ಇದೊಂದು ದೊಡ್ಡಮಟ್ಟದ ಇಲಾಖೆಯಾಗಿದೆ. ನಗರಸಭೆಗಳಲ್ಲಿ ಹಣಕಾಸಿನ ಕೊರತೆಯಿಂದಾಗಿ ಹಲವು ಯೋಜನೆಗಳು ಕುಂಟುತ್ತಾ ಸಾಗಿವೆ. ನಗರೋತ್ಥಾನ ಯೋಜನೆಗೆ ಹೆಚ್ಚು ಒತ್ತು ಕೊಡಲಾಗುವುದು ಎಂದು ಅವರು ಹೇಳಿದರು.

ನಗರ, ಪಟ್ಟಣದಲ್ಲಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಹಾಗೂ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವುದಕ್ಕೆ ಒತ್ತು ನೀಡಲಾಗುವುದು. ಕುಂದಗೋಳ ತಾಲೂಕಿನಲ್ಲಿ 15 ಎಕರೆ ಜಮೀನು ಖರೀದಿ ಮಾಡಲಾಗಿದೆ. ಇನ್ನೂ 10 ಎಕರೆ ಖರೀದಿ ಹಂತದಲ್ಲಿದೆ. ಒಂದೆ ಕಡೆ ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಅದಕ್ಕೆ ಯಾವ ರೀತಿಯ ಕಾಯಕಲ್ಪಕೊಡಬೇಕು ಅನ್ನೋದು ತೀರ್ಮಾನ ಮಾಡುತ್ತೇನೆ. ಈ ಹಿಂದೆ ಪರಿಸರ ಇಲಾಖೆಯ ಜವಾಬ್ದಾರಿಯೇ ಬೇಡ ಎಂದು ಸಚಿವರು ಹಿಂದೇಟು ಹಾಕುತ್ತಿದ್ದರು. ಆದರೆ ಬಸಲಿಗಪ್ಪನವರು ಆ ಖಾತೆಯನ್ನು ತೆಗೆದುಕೊಂಡು ರಾಷ್ಟ್ರಮಟ್ಟದಲ್ಲಿ ಪರಿಸರ ಖಾತೆಯ ಮಹತ್ವವನ್ನು ಸಾರಿದರು ಎಂದು ಶಿವಳ್ಳಿ ಹೇಳಿದರು.

ನಾವು ವಿಫಲರಾಗಿದ್ದೇವೆ

ಉತ್ತರ ಕರ್ನಾಟಕಕ್ಕೆ ಅನ್ಯಾಯಗುತ್ತಿದೆ ಎಂದು ಆರೋಪ ಕೇಳಿ ಬರುವುದು ಸಹಜ. ಆದರೆ ನಮ್ಮ ಭಾಗದ ಅಭಿವೃದ್ಧಿಗೆ ನಾವು ಯಾವ ಯೋಜನೆಗಳನ್ನು ತರಬೇಕು ಅನ್ನೋದು ಮುಖ್ಯ. ಈಗ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಆರು ಸ್ಥಾನ ನೀಡಿದ್ದಾರೆ. ಯೋಜನೆಗಳನ್ನು ತರುವ ವಿಚಾರದಲ್ಲಿ ನಾವು ವಿಫಲರಾಗಿದ್ದೇವೆ. ಉತ್ತರ ಕರ್ನಾಟಕದಿಂದಲೇ ಅನೇಕ ಮಂದಿ ಮುಖ್ಯಮಂತ್ರಿಯಾಗಿದ್ದಾರೆ.

-ಸಿ.ಎಸ್.ಶಿವಳ್ಳಿ, ಪೌರಾಡಳಿತ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News