ಮೈಸೂರು: ಮುಡಾ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ; ಕೋಟ್ಯಾಂತರ ರೂ. ಮೌಲ್ಯದ ದಾಖಲೆ ಪತ್ರಗಳ ವಶ
ಮೈಸೂರು,ಡಿ.28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಕೆ.ಮಣಿ ಅವರ ಮನೆ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಾಂತರ ಬೆಲೆ ಬಾಳುವ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸಿಬಿ ಎಸ್ಪಿ ಡಾ.ಎಚ್.ಟಿ.ಶೇಖರ್ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಲವತ್ತ ಗ್ರಾಮದಲ್ಲಿರುವ ಮುಡಾ ವಲಯ ಸಹಾಯಕ ಇಂಜಿನಿಯರ್ ಕೆ.ಮಣಿ ಅವರ ಮನೆ ಮೇಲೆ ದಾಳಿ ನಡೆಸಿ ರಾತ್ರಿ 8 ಗಂಟೆಯ ವರೆಗೂ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸಿಬಿ ಎಸ್ಪಿ ಡಾ.ಎಚ್.ಟಿ.ಶೇಖರ್, ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಮುಡಾ ಇಂಜಿನಿಯರ್ ಅವರ ಮನೆ ಮೇಲೆ ದಾಳಿ ನಡೆಸಿದ್ದು, 2 ಮನೆ, 2 ಸೈಟು, ನಾಲ್ಕು ಬೈಕ್, ಎರಡು ಕಾರು, 350 ಗ್ರಾಂ.ಚಿನ್ನ, 450 ಗ್ರಾಂ ಬೆಳ್ಳಿ, ಒಂದು ಎಕರೆ ಜಮೀನಿನ ಪತ್ರ, ಒಂದು ಪೆಟ್ರೋಲ್ ಬಂಕ್ ಗೆ ಪಾಲುದಾರರಾಗಿರುವ ಪತ್ರ ಸೇರಿದಂತೆ ಮಹತ್ವದ ದಾಖಲೆಗಳು ದೊರಕಿದ್ದು, ಅವುಗಳನ್ನು ಪರೀಶಿಲಿಸಲಾಗುತ್ತಿದೆ ಎಂದು ಹೇಳಿದರು.