ತುಮಕೂರು: 14 ವರ್ಷದ ಬಾಲಕನ ಮೇಲೆ ಪೊಲೀಸ್ ದೌರ್ಜನ್ಯ; ಆರೋಪ

Update: 2018-12-28 17:13 GMT

ತುಮಕೂರು,ಡಿ.28: 6 ವರ್ಷದ ಬಾಲಕಿಯ ಮೇಲೆ 14 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಾಲಕನನ್ನು ಪೊಲೀಸ್ ಠಾಣೆಯಲ್ಲಿ ದಿನಪೂರ್ತಿ ಕೂರಿಸಿದ್ದ ಘಟನೆ ತುಮಕೂರು ಮಹಿಳಾ ಠಾಣೆಯಲ್ಲಿ ನಡೆದಿದೆ ಎನ್ನಲಾಗಿದೆ.

ತುಮಕೂರು ಹೊರವಲಯದ ಹಳ್ಳಿಯ 14 ವರ್ಷದ ಹುಡುಗನ ಮೇಲೆ 6 ವರ್ಷದ ಬಾಲಕಿಯ ಪೋಷಕರು ಗುರುವಾರ ಲೈಂಗಿಕ ಕಿರುಕುಳದ ದೂರು ನೀಡಿದ್ದು, ಪೋಷಕರ ಮುಖಾಂತರವೇ ಬಾಲಕನನ್ನು ಠಾಣೆಗೆ ಕರೆಸಿಕೊಂಡು ವಶಕ್ಕೆ ಪಡೆದ ಮಹಿಳಾ ಠಾಣೆ ಪೊಲೀಸರು ಠಾಣೆಯಲ್ಲಿ ದಿನಪೂರ್ತಿ ಆತನನ್ನು ಕೂರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಸಂಜೆವರೆಗೆ ಠಾಣೆಯಲ್ಲಿಯೇ ಕೂರಿಸಿಕೊಂಡಿದ್ದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಂರಕ್ಷಣಾಧಿಕಾರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡದೇ, ಮಹಿಳಾ ಪೊಲೀಸ್ ಠಾಣೆ ಸಿಪಿಐ ಪಾರ್ವತಮ್ಮ ಬಾಲಕನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಇಲ್ಲಸಲ್ಲದ ನೆಪಹೇಳಿಕೊಂಡು ಉದ್ದೇಶಪೂರ್ವಕವಾಗಿಯೇ ದಿನಪೂರ್ತಿ ಠಾಣೆಯಲ್ಲಿಯೇ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಆರೋಪಿ ಬಾಲಕನನ್ನು ಪೊಲೀಸರು ಠಾಣೆಯಲ್ಲಿಯೇ ಕೂರಿಸಿದ್ದರಿಂದ ಆತಂಕಗೊಂಡಿದ್ದ ಆತನ ಪಾಲಕರು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಹಾಯ ಕೋರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಹಿಂದೆ ಬಿದ್ದ ಪಾಲಕರು ಬಾಲಕನನ್ನು ಶುಕ್ರವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಕಾನೂನು ಏನು ಹೇಳುತ್ತದೆ...?
ಬಾಲ ನ್ಯಾಯ ಕಾಯ್ದೆ(ಪಾಲನೆ ಮತ್ತು ರಕ್ಷಣೆ 2015), ರಾಷ್ಟ್ರೀಯ ಮಕ್ಕಳ ನೀತಿ, ರಾಷ್ಟ್ರೀಯ ಮಕ್ಕಳ ರಕ್ಷಣಾ ನೀತಿಯು 18 ವರ್ಷದೊಳಗಿನ ಮಕ್ಕಳನ್ನು ಠಾಣೆಗೆ ಕರೆದುಕೊಂಡ ಹೋಗಬಾರದು, ಪೊಲೀಸ್ ಸಮವಸ್ತ್ರದಲ್ಲಿ ವಿಚಾರಣೆ ನಡೆಸಬಾರದು, ಮಗು ಇಷ್ಟು ಇಷ್ಟಪಡುವ ಸ್ಥಳದಲ್ಲಿ ಪಾಲಕರ ಸಮ್ಮುಖದಲ್ಲಿಯೇ ವಿಚಾರಣೆ ನಡೆಸಬೇಕು ಎಂದು ತಿಳಿಸಿದೆ.

ಮಕ್ಕಳ ಹಕ್ಕುಗಳ ರಕ್ಷಣೆಗೆ ಇಷ್ಟೆಲ್ಲಾ ಕಾನೂನುಗಳಿದ್ದು ಈ ಬಗ್ಗೆ ಎಲ್ಲಾ ಪೊಲೀಸರಿಗೂ ತರಬೇತಿ ಕೂಡ ನೀಡಲಾಗಿದೆ. ಆದರೆ, ತುಮಕೂರು ಮಹಿಳಾ ಠಾಣೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘಿಸಿರುತ್ತಿರುವ ಪ್ರಕರಣ ಪುನರಾವರ್ತನೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆಸಿ ವಿಚಾರಣೆ ನಡೆಸಲು ಅವಕಾಶವಿಲ್ಲ. ಠಾಣೆಯಲ್ಲಿ ದಿನಪೂರ್ತಿ ಇಟ್ಟುಕೊಂಡಿದ್ದರು ಎಂಬ ದೂರು ಬಂದಿದೆ, ಈ ಬಗ್ಗೆ ಬಾಲಕನ ಹೇಳಿಕೆ ಪಡೆಯಲಾಗುವುದು.
-ವಾಸಂತಿ ಉಪ್ಪಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಮಹಿಳಾ ಠಾಣೆಯಲ್ಲಿ ಫೋಕ್ಸೊ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿಯೇ ವಿಚಾರಣೆ ನಡೆಯಬೇಕು. ಠಾಣೆಗೆ ಕರೆದುಕೊಂಡು ಬಂದು, ಇಟ್ಟುಕೊಂಡಿದ್ದರೆ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.
-ಡಾ.ದಿವ್ಯಾ ಗೋಪಿನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News