ಚಾರ್ಜ್ ಮಾಡುತ್ತಿದ್ದಾಗ ಸ್ಫೋಟಗೊಂಡ ಮೊಬೈಲ್ ಫೋನ್ : ಒಂದೇ ಕುಟುಂಬದ ನಾಲ್ಕು ಮಂದಿಗೆ ಗಾಯ

Update: 2018-12-29 10:57 GMT

ಥಾಣೆ,ಡಿ.29:  ಮೊಬೈಲ್ ಫೋನ್ ಸ್ಫೋಟಗೊಂಡು  ಒಂದೇ ಕುಟುಂಬದ ನಾಲ್ಕು ಮಂದಿಗೆ ಸುಟ್ಟ ಗಾಯಗಳುಂಟಾದ ಘಟನೆ ಶಾಹಪುರದ ಮನೆಯೊಂದರಲ್ಲಿ ಸಂಭವಿಸಿದೆ. ಫೋನನ್ನು ಚಾರ್ಜ್ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾಜೇಂದ್ರ ಶಿಂಧೆ (43) ಅವರ ಪತ್ನಿ ರೋಶನಿ (38), ಪುತ್ರಿ ರಚನಾ (13) ಹಾಗೂ ಪುತ್ರ ಅಭಿಷೇಕ್ (10) ಗಾಯಗೊಂಡು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆತ್ತವರಿಗೆ ಗಂಭೀರ ಗಾಯಗಳುಂಟಾಗಿದ್ದರೆ ಮಕ್ಕಳಿಬ್ಬರಿಗೆ ಸಣ್ಣ ಪುಟ್ಟ ಗಾಯಗಳುಂಟಾಗಿವೆ.

ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನ ಕಸರಾಲಿ ಪ್ರದೇಶದ ಪ್ರತೀಕ್ಷಾ ಅಪಾರ್ಟ್ ಮೆಂಟ್ ನಲ್ಲಿ ಕುಟುಂಬ ವಾಸವಾಗಿದೆ.  ಸ್ಫೋಟಗೊಂಡ ಫೋನನ್ನು ರಾಜೇಂದ್ರ ಎರಡು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದರು. "ನಾನು ಹಾಸಿಗೆಯ ಮೇಲೆ ಮಲಗಿದ್ದರೆ, ಪತ್ನಿ ಮತ್ತು ಮೂವರು ಮಕ್ಕಳು ಕೆಳಗೆ ಚಾಪೆಯಲ್ಲಿ ಮಲಗಿದ್ದರು. ಫೋನ್ ಕಿಟಿಕಿ ಸಮೀಪವಿತ್ತು. ಚಾರ್ಜರ್ ಪ್ಲಗ್ ತೆಗೆಯಬೇಕೆನ್ನುವಷ್ಟರಲ್ಲಿ ಫೋನ್ ಸ್ಫೋಟಗೊಂಡಿತ್ತು,'' ಎಂದು ಆಸ್ಪತ್ರೆಯಲ್ಲಿರುವ ರಾಜೇಂದ್ರ ವಿವರಿಸಿದ್ದಾರೆ. ಮುಲುಂದ್ ನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಅವರು  ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಫೋನ್ ಸ್ಫೋಟಗೊಂಡಾಗ ಕಿಟಿಕಿಯ ಪರದೆಗಳು ಹಾಗೂ ಬೆಡ್ ಶೀಟುಗಳಿಗೂ ಬೆಂಕಿ ಹತ್ತಿಕೊಂಡಿತ್ತು. ರಾಜೇಂದ್ರ ಅವರ ಇನ್ನೊಬ್ಬ ಮಗನಿಗೆ ಮಾತ್ರ ಯಾವುದೇ ಗಾಯಗಳುಂಟಾಗಿಲ್ಲ.

ಆರಂಭದಲ್ಲಿ ಗಾಯಾಳುಗಳನ್ನು ನೆರೆಹೊರೆಯವರು ಹತ್ತಿರದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಂದ ನಂತರ ಅವರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News