ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಸಾಕಾರಗೊಳ್ಳಲಿ: ಸಚಿವ ದೇಶಪಾಂಡೆ

Update: 2018-12-29 17:20 GMT

ಬೆಂಗಳೂರು, ಡಿ. 29: ದಶಕಗಳ ಕನಸಿನ ಯೋಜನೆಯಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಅರಣ್ಯ ಮತ್ತು ಪರಿಸರದ ಕಾರಣಗಳ ಹಿನ್ನೆಲೆಯಲ್ಲಿ ಕೈಬಿಡುವ ಇಂಗಿತವನ್ನು ವ್ಯಕ್ತಪಡಿಸಿರುವ ಕೇಂದ್ರ ಸರಕಾರದ ಧೋರಣೆ ಸರಿಯಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆನ್ನುವುದು ಈ ಭಾಗದ ಜನತೆಯ ಹಲವು ದಶಕಗಳ ಹಂಬಲ. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಸಾಧಿಸಬೇಕಾದ ಅಗತ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು, ಈ ಯೋಜನೆಯ ಸಾಕಾರಕ್ಕೆ ಸೂಕ್ತ ಮಾರ್ಗ ಹುಡುಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ರೈಲು ಮಾರ್ಗ ಸಾಕಾರಗೊಂಡರೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಈ ಭಾಗದ ವಾಣಿಜ್ಯ ವಹಿವಾಟು ಸುಗಮವಾಗಲಿದೆ. ಪರಿಸರ ಸಂರಕ್ಷಣೆಯ ಜೊತೆಯಲ್ಲೇ ಈ ಜರೂರನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸಂಕೀರ್ಣವಾದ ಅಡೆ-ತಡೆಗಳು ಎದುರಾಗುವುದು ಸಹಜ. ಹಾಗೆಂದು, ಯೋಜನೆಯನ್ನೇ ಏಕಾಏಕಿಯಾಗಿ ಕೈಬಿಡುವುದು ಅಸಮತೋಲನಕ್ಕೂ ಕಾರಣವಾಗಬಲ್ಲದು. ಹೀಗಾಗಿ, ಹುಬ್ಬಳ್ಳಿ- ಅಂಕೋಲಾ ರೈಲುಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಒತ್ತು ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News