ಗದಗ: ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ; 6 ಮಂದಿ ಸ್ಥಳದಲ್ಲೇ ಮೃತ್ಯು

Update: 2018-12-30 13:55 GMT

ಗದಗ, ಡಿ.30: ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದ ಪರಿಣಾಮ 6 ಜನರು ಸ್ಥಳದಲ್ಲೇ ಮೃತಪಟ್ಟು, 4 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗದಗ ಹಾಗೂ ಮುಂಡರಗಿ ನಡುವೆ ಇರುವ ಅಡವಿ ಸೋಮಾಪುರ ಬಳಿ ನಡೆದಿದೆ.

ಮೃತರೆಲ್ಲಾ 26 ರಿಂದ 28 ವಯಸ್ಸಿನವರಾಗಿದ್ದಾರೆ. ಮೃತರನ್ನು ಐ-10 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧಾರವಾಡದ ಹೆಬ್ಬಳ್ಳಿ ನಿವಾಸಿಗಳಾದ ಆನಂದ ಬೆಟಗೇರಿ(28), ಸಿದ್ದು ಕೋರಿಶೆಟ್ಟಿ(26), ಮನೋಜಕುಮಾರ ಕರಡಿಗುಡ್ಡ(27), ಅಮೃತ(26), ಚನ್ನು ಬಾಡದ(27) ಹಾಗೂ ಅರುಣ ಬೆಟಗೇರಿ(26) ಎಂದು ಗುರುತಿಸಲಾಗಿದೆ. ಇವರೆಲ್ಲ ಮದುವೆಗೆಂದು ಹೊರಟಿದ್ದರು ಎನ್ನಲಾಗಿದೆ.

ಗದಗದಿಂದ ಮುಂಡರಗಿ, ಹಾಗೂ ಮುಂಡರಗಿಯಿಂದ ಗದಗದ ಕಡೆ ಎರಡು ಕಾರು ತೆರಳುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಐ-10 ಕಾರಿನಲ್ಲಿದ್ದ 6 ಮಂದಿ ಮೃತಪಟ್ಟಿದ್ದಾರೆ. ಐ-20ಯಲ್ಲಿದ್ದ ಗದಗ ಮೂಲದ ಮಂಜುನಾಥ ಹಳ್ಳಿಕೇರಿ, ವಿರುಪಾಕ್ಷಪ್ಪ ಅಬ್ಬಿಗೇರಿ, ವಿಜಯಕುಮಾರ ಬನವಾಸಿ, ವಿಶ್ವನಾಥ ಕೆರೂರ ಇವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನ ಮದುವೆ ಸಮಾರಂಭದ ಖುಷಿಯಲ್ಲಿದ್ದವರು ದುರಂತವಾಗಿ ಮಸಣ ಸೇರುವಂತಾದುದು ನೋಡಿದವರ ಮನ ಕಲುಕುವಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News