ಭಾರತ ಮಾತೆಗೆ ಜೈ, ವಂದೇಮಾತರಂ ಎಂದ ಮಾತ್ರಕ್ಕೆ ಭಾರತ ಜಗದ್ಗುರು ಆಗುವುದಿಲ್ಲ: ಬಾಬಾ ರಾಮದೇವ್
#“ಧರ್ಮ, ರಾಜನೀತಿ ಅಸಹಿಷ್ಣುತೆಯಿಂದ ದೇಶದಲ್ಲಿ ಅಸ್ಥಿರತೆ”
#“ಮಂದಿರ ನಿರ್ಮಾಣಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳಬೇಕು”
ವಿಜಯಪುರ, ಡಿ. 30: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಖುರ್ಚಿ ಆಸೆಗಾಗಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷದ ವಾತಾವರಣವನ್ನು ನಿರ್ಮಿಸುತ್ತಿವೆ ಎಂದು ಖ್ಯಾತ ಯೋಗ ಗುರು ಬಾಬಾ ರಾಮದೇವ್ ಕಳವಳ ವ್ಯಕ್ತಪಡಿಸಿದರು.
ವಿಜಯಪುರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ಬಹುತೇಕ ಚಾನಲ್‍ಗಳಲ್ಲಿ ಜ್ಯೋತಿಷ್ಯ, ವಾಸ್ತುವಿನ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ, ಆದರೆ ಜ್ಯೋತಿಷ್ಯದ ಹೆಸರಿನಲ್ಲಿ, ವಾಸ್ತುವಿನ ಹೆಸರಿನಲ್ಲಿ ಕೆಲವು ಢಾಂಬಿಕತನ ತಾಂಡವವಾಡುತ್ತಿದೆ, ಶನಿ-ರಾಹು-ಕೇತು-ತಂತ್ರ-ಷಡ್ಯಂತ್ರ ಭಾರತೀಯ ಧರ್ಮ ದರ್ಶನ ಅಲ್ಲ, ಭಾರತೀಯ ಧರ್ಮ ದರ್ಶನ ಸಂಪೂರ್ಣ ವೈಜ್ಞಾನಿಕವಾಗಿದೆ ಎಂದು ಬಾಬಾ ರಾಮದೇವ್ ತಿಳಿಸಿದರು.
ಉದಾತ್ತ ಆರ್ಥಿಕತೆ, ಉನ್ನತ ಆಧ್ಯಾತ್ಮಿಕತೆ, ಸಾತ್ವಿಕ ರಾಜನೀತಿಯ ಬಲದಿಂದ 2040 ರಲ್ಲಿ ಭಾರತವನ್ನು ಆಧ್ಯಾತ್ಮಿಕ ಮಹಾಶಕ್ತಿಯಾಗಿ ರೂಪಿಸಬೇಕಾಗಿದೆ, ಜಾತಿ, ಧರ್ಮ, ರಾಜನೀತಿ ಅಸಹಿಷ್ಣುತೆಯಿಂದ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಸ್ಥಿರತೆ ಉಂಟಾಗುತ್ತಿದೆ. ದೇಶದ ಏಕತೆ, ಅಖಂಡತೆಗೆ ಧಕ್ಕೆ ಬರುತ್ತಿದೆ. ರಾಜನೀತಿ ಪಕ್ಷಗಳು ಜಾತಿ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ರಾಜಕೀಯ ಪಕ್ಷಗಳು ಅಧಿಕಾರ ಗಿಟ್ಟಿಸಿಕೊಳ್ಳಲು ಹವಣಿಸುತ್ತಿವೆ, ಈ ಹಿನ್ನೆಲೆಯಲ್ಲಿ ಪತಂಜಲಿ ರಾಜನೀತಿಕ ದೃಷ್ಟಿಯಿಂದ ಪಕ್ಷ-ಪ್ರತಿಪಕ್ಷವನ್ನು ಯಾವುದೇ ರೀತಿಯಿಂದ ಬೆಂಬಲಿಸದೆ ನಿಷ್ಪಕ್ಷಪಾತವಾಗಿ ದೇಶಕ್ಕಾಗಿ ದುಡಿಯುವವರಿಗೆ ಸಹಯೋಗ ನೀಡುತ್ತಿದೆ ಎಂದು ರಾಮದೇವ ಸ್ಪಷ್ಟಪಡಿಸಿದರು.
ವಿಶ್ವದ ದೊಡ್ಡ ವಿ.ವಿ. ಭಾರತದಲ್ಲಿ ನಿರ್ಮಾಣ
ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ವಿಶ್ವವಿದ್ಯಾಲಯವನ್ನು ನವದೆಹಲಿಯಲ್ಲಿ ಪತಂಜಲಿ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲು ಬೃಹತ್ ಗುರಿ ಹಾಕಿಕೊಳ್ಳಲಾಗಿದೆ. ನಳಂದಾ, ತಕ್ಷಶೀಲಾ ಮಾದರಿಯ ಶಿಕ್ಷಣ ನೀಡುವ ಮೂಲಕ ದೇಶದಲ್ಲಿನ ಶೈಕ್ಷಣಿಕ ಗತವೈಭವವನ್ನು ಮರಳಿ ತರುವ ಸಂಕಲ್ಪ ಮಾಡಲಾಗಿದೆ.
ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ವಸತಿ ಸಹಿತ ಸೌಲಭ್ಯವುಳ್ಳ ಶಿಕ್ಷಣ ನೀಡುವುದು ಈ ಬೃಹತ್ ವಿ.ವಿ.ಯ ಸಂಕಲ್ಪವಾಗಿದೆ. ಸುಸಜ್ಜಿತವಾದ ಅಧ್ಯಯನ ಕೋಣೆ, ವಲ್ಡ್ ಕ್ಲಾಸ್ ರಿಸರ್ಚ್ ಸೆಂಟರ್, ವ್ಯವಹಾರ ಅಧ್ಯಯನ, ಕಾನೂನು, ಕ್ರೀಡೆ ಹೀಗೆ ಸಕಲ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತಿದೆ. 20-25 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೆಲವೇ ವರ್ಷಗಳಲ್ಲಿ ಈ ವಿಶ್ವವಿದ್ಯಾಲಯ ಜ್ಞಾನರ್ಜನೆಯ ಕಾರ್ಯ ಆರಂಭಿಸಲಿದೆ ಎಂದರು.
ದೇಶದಲ್ಲಿ ಎರಡು ರೀತಿಯ ಬಡತನಗಳಿವೆ, ವೈಚಾರಿಕ ಬಡತನ, ಆರ್ಥಿಕ ಬಡತನ, ಈ ಎರಡು ವಿಧದ ಬಡತನ ನಮ್ಮ ದೇಶಕ್ಕೆ ಕಾಡುತ್ತಿದೆ. ಈ ಬಡತನಗಳು ದೂರವಾಗಬೇಕು, ಸ್ವಾಸ್ಥ್ಯ ಸಮಾಜ ನಿರ್ಮಾಣಗೊಂಡಾಗ ಮಾತ್ರ ಸಮೃದ್ಧ ಭಾರತ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಯ ಘೋಷಣೆಯಿಂದ ಭಾರತ ಜಗದ್ಗುರುವಾಗುವುದಿಲ್ಲ
ಭಾರತ ಮಾತೆಗೆ ಜಯವಾಗಲಿ, ವಂದೇ ಮಾತರಂ ಎನ್ನುವ ಘೋಷಣೆಗಳನ್ನು ಮೊಳಗಿಸಿದ ಮಾತ್ರಕ್ಕೆ ಭಾರತ ಜಗದ್ಗುರು ಆಗಿ ರೂಪುಗೊಳ್ಳುವುದಿಲ್ಲ. ಇದಕ್ಕೆ ಕರ್ಮಯೋಗಿಯಾಗಬೇಕಿದೆ. ಜಾತಿ ಮುಕ್ತ ಭಾರತ ರಾಜಕೀಯ ಪಕ್ಷಗಳ ಸಂಕಲ್ಪವಾಗುತ್ತಿಲ್ಲ. ಕೇವಲ ರಾಜಕೀಯ ಪಕ್ಷಗಳು ಜಾತಿ ಹಾಗೂ ಧರ್ಮ ಹೆಸರಿನಲ್ಲಿ ವೈಷಮ್ಯದ ವಿಷಬೀಜ ಬಿತ್ತುತ್ತಿವೆ. ವ್ಯಸನಮುಕ್ತ, ದಿವ್ಯತಾಯುಕ್ತ ಭಾರತ ರಾಜಕೀಯ ಪಕ್ಷಗಳ ಧ್ಯೇಯವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿದೇಶಿ ಕಂಪನಿಗಳಿಂದ ನಮ್ಮ ಬೆವರು ಸುರಿಸಿ ಗಳಿಸಿದ ಹಣ ಲೂಟಿಯನ್ನು ತಪ್ಪಿಸಬೇಕಾಗಿದೆ ಎಂದರು. ಪ್ರತಿಯೊಂದು ಗ್ರಾಮಕ್ಕೊಂದು ಯೋಗಶಾಲೆ ತೆರೆಯುವುದು ಪತಂಜಲಿ ಯೋಗ ಸಮಿತಿಯ ಧ್ಯೇಯವಾಗಿದ್ದು, 11 ಲಕ್ಷ ಯೋಗ ಶಾಲೆ ನಿರ್ಮಿಸುವ ಧೃಡ ಸಂಕಲ್ಪ ಮಾಡಲಾಗಿದೆ ಎಂದರು.
ರಾಮನನ್ನು ಜಾತಿಯೊಂದಿಗೆ ಹಂಚಿಕೆ ಮಾಡಬೇಡಿ
ಭಗವಾನ ರಾಮ, ಹನುಮಂತ, ಪತಂಜಲಿ ಮಹರ್ಷಿಯನ್ನು ಒಂದೊಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಮಂದಿರ ನಿರ್ಮಾಣಕ್ಕಿಂತ ಶ್ರೀರಾಮನ ಆದರ್ಶ ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ದೊರಕಬೇಕಿದೆ. ಮೂರ್ತಿಪೂಜಕನಲ್ಲ, ನಿರಾಕಾರ ಪರಮಾತ್ಮನ ಉಪಾಸಕ, ರಾಮನ ವ್ಯಕ್ತಿತ್ವ ನಿರ್ಮಾಣ ನಮ್ಮಲ್ಲಿ ಆಗಬೇಕಿದೆ ಎಂದರು.
ಶ್ರೀರಾಮನ ಕುರಿತಂತೆ ಕರ್ನಾಟಕದ ಸಂಶೋಧಕರೊಬ್ಬರು ಅವಹೇಳನಕಾರಿಯಾಗಿ ಮಾತನಾಡಿರುವ ಕ್ರಮವನ್ನು ವಿರೋಧಿಸಿ ಬಾಬಾ, ನಮ್ಮ ಪೂರ್ವಜರನ್ನು ಈ ರೀತಿ ಅವಮಾನ ಮಾಡುವುದು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹಾಪರಾಧವಾಗಿದೆ ಎಂದರು.
ಹಮ್ ತೋ ಫಕೀರ ಹೈ - ವಜೀರ ಸೇ ಜುಡ್ತೆ ನಹೀ
ಪ್ರಧಾನಿ ಮೋದಿ ಅವರು ಆಶಯಗಳನ್ನು ಈಡೇರಿಸಿದ್ದಾರೆಯೇ ? ಕಪ್ಪು ಹಣ ವಾಪಾಸ್ಸು ತರಲು ಪ್ರಯತ್ನಶೀಲರಾಗಿದ್ದಾರಾ? ಎಂಬ ಪ್ರಶ್ನೆಗೆ ಸೂಚ್ಯವಾಗಿ ಉತ್ತರಿಸಿದ ಬಾಬಾ, `ಹಮ್ ತೋ ಫಕೀರ ಹೈ-ವಜೀರ ಸೇ ಜುಡ್ತೆ ನಹೀ (ನಾನೊಬ್ಬ ಸಂತ, ಪ್ರಧಾನಿಯೊಂದಿಗೆ ಜೋಡಣೆಯಾಗಲು ಸಾಧ್ಯವೇ ? ಎಂದರು.
ರಾಜನೀತಿಯಿಂದ ಅನಿಶ್ಚಯ ಭಾವನಾ ತಲೆದೂರಿದೆ. ಗೋ ಹತ್ಯೆ ಹೆಸರಿನಲ್ಲಿ ಹಿಂಸೆ ಸರಿಯಲ್ಲ. ಆದರೆ ಗೋಮಾತೆ ಉಳಿಯಬೇಕು, ಮಾನವೀಯತೆಯೂ ಉಳಿಯಬೇಕು. ಇಂತಹ ಕೆಲವೊಂದು ಪ್ರಕರಣಗಳು ನಡೆದಾಗ ಇಡೀ ರಾಷ್ಟ್ರದಲ್ಲಿಯೇ ಈ ವಾತಾವರಣವಿದೆ, ರಾಷ್ಟ್ರದೆಲ್ಲಡೆ ಅಸಹಿಷ್ಣು ವಾತಾವರಣ ಉಂಟಾಗಿದೆ ಎಂದು ತಿಳಿಯಬೇಕಿಲ್ಲ ಎಂದರು. ಹಿಂದೂ-ಮುಸ್ಲಿಮರು ಇಬ್ಬರೂ ರಾಷ್ಟ್ರವನ್ನು ನಿರ್ಮಿಸಿದ್ದಾರೆ, ಅಲ್ಲಾಹ ಹೇಳಲಿ, ಭಗವಾನ ಹೇಳಲಿ ನಮ್ಮ ರಕ್ತ ಒಂದೇ, ನಮ್ಮ ಪೂರ್ವಜರು ಒಂದೇ, ಮಂದಿರ-ಮಸ್ಜಿದ್ ಹೆಸರಿನಲ್ಲಿ ಹೃದಯವನ್ನು ಕಲ್ಲಾಗಿಸಿಕೊಳ್ಳಬೇಡಿ ಎಂದರು.
ಕೇಂದ್ರ ಸರ್ಕಾರಕ್ಕೆ ಎಷ್ಟು ಮಾರ್ಕ್ಸ್ ನೀಡುತ್ತೀರಿ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಬಾಬಾ, ದೇಶದಲ್ಲಿರುವ ಕಪ್ಪು ಹಣ ವಾಪಾಸ್ಸು ತರಲು ಮೋದಿ ಸರ್ಕಾರ ಕೆಲವೊಂದು ಕ್ರಮ ಕೈಗೊಳ್ಳುತ್ತಿದೆ ಎಂದು `ಅರೇ...ಬಾಬಾಜೀ ಕೋ ಪರೇಷಾನ್ ಮತ್ ಕರೋ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಂತರ ಕಾಲಾಧನ್ ಕಾ ಮುದ್ದಾ ಮೋದಿ ಜಿ ಕೋ ದಿಯಾ ಹೈ...ಕಾಲಾ ಮನ ಸಾಫ್ ಕರ್ನೇಕಾ ಮುದ್ದಾ ಮೈ ನೇ ಲಿಯಾ ಹೈ (ಕಪ್ಪು ಹಣ ವಿಷಯವನ್ನು ಮೋದಿ ಅವರ ಹೆಗಲಿಗೆ ವಹಿಸಿದ್ದೇನೆ, ಕಪ್ಪು ಮನಗಳನ್ನು ಶುದ್ಧೀಕರಿಸುವ ಕಾರ್ಯವನ್ನು ನನ್ನ ಹೆಗಲಿಗೆ ವಹಿಸಿಕೊಂಡಿದ್ದೇನೆ ಎಂದರು.