×
Ad

ಹನೂರು: ನುಲಿಯ ಚಂದಯ್ಯ ಸ್ಮರಣೋತ್ಸವ ಹಾಗೂ ಜಿಲ್ಲಾ ಸಮಾವೇಶ

Update: 2018-12-30 19:47 IST

ಹನೂರು,ಡಿ.30: ಮಕ್ಕಳನ್ನು ಶಿಕ್ಷಣದತ್ತ ಮುಖ ಮಾಡುವಂತೆ ಮಾಡಿದರೆ ಕೊರಮ ಸಮಾಜದ ಪ್ರತಿಯೊಬ್ಬರೂ ಸಹ ಭವಿಷ್ಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸುಧಾರಣೆ ಕಂಡು ದೇಶದ ಆಸ್ತಿಯಾಗಿ ಹೊರ ಹೊಮ್ಮಲು ಸಾಧ್ಯವಿದೆ ಎಂದು ಶಾಸಕ ಅರ್.ನರೇಂದ್ರರಾಜುಗೌಡ ಅಭಿಪ್ರಾಯಪಟ್ಟರು. 

ಚಾಮರಾಜನಗರ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘ ಮತ್ತು ಅಖಿಲ ಕರ್ನಾಟಕ ಕೊರಮ ಸಂಘ ಬೆಂಗಳೂರು, ಚಾಮರಾಜನಗರ ಜಿಲ್ಲಾ ಯುವ ಘಟಕದ ಸಂಯುಕ್ತಾಶ್ರದಲ್ಲಿ ಶ್ರೀ ನುಲಿಯ ಚಂದಯ್ಯನವರ 911 ನೇ ಸ್ಮರಣೋತ್ಸವ ಹಾಗೂ ಜನಾಂಗದ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಯಾವುದೇ ಒಂದು ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಬೇಕೆಂದರೆ ಸಮಾಜದ ಪ್ರತಿಯೊಬ್ಬರೂ ಸಹ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಿ ಪ್ರೋತ್ಸಾಹಿಸಬೇಕು. ಯಾರು ಸಹ ದುಶ್ಚಟಗಳಿಗೆ ದಾಸರಾಗದೇ ತಮ್ಮ ಕೌಟುಂಬಿಕ ಬದುಕಿನಲ್ಲಿ ನೆಮ್ಮದಿಯಿಂದ ಬದುಕುವಂತವರಾಗಿ ಮತ್ತು ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ವಿವಾಹ ಮಾಡುವುದನ್ನು ಬಿಟ್ಟು, ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ನೀಡಿ ಎಂದು ಹೇಳಿದರು.

ನಂತರ ಅಖಿಲ ಕರ್ನಾಟಕ ಕೊರಮ ಜನಾಂಗದ ರಾಜ್ಯಾಧ್ಯಕ್ಷ ಎನ್.ಮಾದೇಶ್ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಸಹ ತಮ್ಮ ಮಕ್ಕಳಿಗ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸಿ. ಸಮುದಾಯದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಿ ಎಂದ ಅವರು, ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ತಮ್ಮ ಕಾಯಕವನ್ನು ಶ್ರದ್ದೆ, ನಿಷ್ಠೆಯಿಂದ ಮಾಡಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಶಿವಮ್ಮ, ಮುಖಂಡ ರವಿಕುಮಾರ್, ನಿವೃತ್ತ ಜಿಲ್ಲಾಧಿಕಾರಿ ಅಂಜನ್‍ ಕುಮಾರ್, ಜಿಲ್ಲಾ ಸಂಘ ಅಧ್ಯಕ್ಷ ಕೃಷ್ಣಶೆಟ್ಟ ಮುಖಂಡರಾದ ಮೋಹನ್‍ ಕೃಷ್ಣ, ನೆಲ್ಲೂರು ಮಾದೇಶ್ ಗೋವಿಂದರಾಜು, ಸಿದ್ದಾಪ್ಪಾಜಿ, ಹನುಮಂತು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News