×
Ad

ರಾಜ್ಯಾದ್ಯಂತ 10 ಸಾವಿರ ಹೆಕ್ಟೇರ್‌ನಲ್ಲಿ ಇಸ್ರೇಲ್ ಮಾದರಿ ಬೇಸಾಯ ಅನುಷ್ಠಾನಕ್ಕೆ ಸಿದ್ಧತೆ

Update: 2018-12-30 20:46 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.30: ರಾಜ್ಯ ಸರಕಾರದ ಬಹುನಿರೀಕ್ಷಿತ ಇಸ್ರೇಲ್ ಮಾದರಿ ಸಮಗ್ರ ಬೇಸಾಯ ಅಭಿಯಾನ ಯೋಜನೆಗೆ 300 ಕೋ.ರೂ. ಮೀಸಲಿಟ್ಟಿದ್ದು, ರಾಜ್ಯಾದ್ಯಂತ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಕೃಷಿ ಇಲಾಖೆಯ ವ್ಯಾಪ್ತಿಯ ಐದು ಸಾವಿರ ಹೆಕ್ಟೇರ್ ಹಾಗೂ ತೋಟಗಾರಿಕೆ ಇಲಾಖೆಯ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಯುಕ್ತರ ಸಮಿತಿ ರಚಿಸಲಾಗಿದೆ.

ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ತಾಂತ್ರಿಕ ಗುಚ್ಚಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಕಾರವಾರ, ತುಮಕೂರು, ಯಾದಗಿರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ತಾಂತ್ರಿಕ ಗುಚ್ಚಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಇಸ್ರೇಲ್ ತಂತ್ರಜ್ಞಾನ ಅನುಷ್ಠಾನಗೊಳಿಸಲಿದ್ದು, ಇದರಿಂದ ಬರುವ ಫಲಿತಾಂಶಗಳನ್ನು ಆಧರಿಸಿ ಸಮಿತಿ ಮಾಡುವ ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ. ಅಲ್ಲದೆ, ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ.

ತುಮಕೂರು, ಯಾದಗಿರಿ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆ ಮಾಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ನೀರಿನ ಅಭಾವದ ಸಮಸ್ಯೆ ಎದುರಿಸಲು ಇಸ್ರೇಲ್ ತಂತ್ರಜ್ಞಾನ ಸಹಾಯಕವಾಗಲಿದೆ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಘೋಷಣೆ ಮಾಡಿತ್ತು.

ನಿಖರ ಬೇಸಾಯ, ಸಂರಕ್ಷಿತ ಬೇಸಾಯ, ನೀರಾವರಿಯಲ್ಲಿ ಅಟೋಮೇಷನ್, ನೀರಿನ ಮರು ಬಳಕೆ, ಸಾಮೂಹಿಕ ಕೃಷಿಯಂತಹ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಲು ಸಲಹೆ ಮಾಡಲಾಗಿತ್ತು. ಕಾರವಾರ, ತುಮಕೂರು, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಪದ್ಧತಿ ಅಳವಡಿಸಲು ಉದ್ದೇಶಿಸಲಾಗಿದೆ.

ಅದೇ ರೀತಿ ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಖುಷ್ಕಿ ಜಮೀನಿನಲ್ಲಿ 150 ಕೋಟಿ ಅನುದಾನದಲ್ಲಿ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News