ಸಂವಿಧಾನದ ವಿರುದ್ಧ ಆಡಳಿತ ನಡೆಸುವವರು ಮನುಷ್ಯ ವಿರೋಧಿಗಳು: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-12-30 16:35 GMT

ಮೈಸೂರು,ಡಿ.30: ಸಂವಿಧಾನದ ವಿರುದ್ಧ ಆಡಳಿತ ನಡೆಸುವವರು ಮನುಷ್ಯ ವಿರೋಧಿಗಳು, ಅಂತವರನ್ನು ಧಿಕ್ಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿವಿಯ ರಾಣಿಬಹದ್ದೂರು ಸಭಾಂಗಣದಲ್ಲಿ ರವಿವಾರ ಮೈಸೂರು ವಿಭಾಗೀಯ ಕೇಂದ್ರ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳು ನೌಕರರ ಪರಿಷತ್ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಭಿನಂದನಾ ಸಮಾರಂಭ ಮತ್ತು ಪ್ರೊ.ಟಿ.ಎಂ.ಮಹೇಶ್ ರವರ “ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆ ಮತ್ತು ಆಹಾರ ಭದ್ರತೆ” ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ನಂತರ ಅವರು ಮಾತನಾಡಿದರು.

ಸಂವಿಧಾನದ ಆಶಯಗಳ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಅಂತವರು ಮನುಷ್ಯ ವಿರೋಧಿಗಳು. ಅವರನ್ನು ಧಿಕ್ಕರಿಸಬೇಕಾಗಿರುವುದು ಕರ್ತವ್ಯ ಮತ್ತು ಜವಾಬ್ದಾರಿಯಾಗಬೇಕು ಎಂದು ಹೇಳಿದರು.

ಸಂವಿಧಾನ ಬದಲಾಬೇಕು, ಅದಕ್ಕಾಗಿ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳುತ್ತಾರೆ. ಕೆಲವರು ಸಂವಿಧಾನದ ಪ್ರತಿಯನ್ನು ಸುಟ್ಟುಹಾಕುತ್ತಾರೆ. ಕೇಂದ್ರ ಸಚಿವನ ಹೇಳಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದು ಅವರ ವೈಯಕ್ತಿಕ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಯಾವುದೇ ಮಾತನ್ನು ಆಡದೆ ಮೌನ ವಹಿಸುತ್ತಾರೆ. ಇವರು ಸಂವಿಧಾನದ ಪರ ಇದ್ದಿದ್ದರೆ  ಕೂಡಲೇ ಆತನನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕಿತ್ತು. ಆದರೆ ಆ ಕೆಲಸವನ್ನು ಮಾಡಲಿಲ್ಲ. ಇಂತಹವರ ಮನಸ್ಥಿಯನ್ನು ಅರ್ಥಮಾಡಿಕೊಳ್ಳದಿದ್ದರೆ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಾಜಪೇಯಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಸಂವಿಧಾನ ಪರಮಾರ್ಶೆಗೆ ಕೈಹಾಕಿದರು. ಮೋದಿ ಆಡಳಿತದ ಅವಧಿಯಲ್ಲಿ ಸಂವಿಧಾನ ಬದಲಾವಣೆಗೆ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಕೇಂದ್ರ ಸಚಿವ ಹೇಳುತ್ತಾರೆ. ಸಂವಿಧಾನದ ಪ್ರತಿಯನ್ನು ಸುಟ್ಟುಹಾಕುತ್ತಾರೆ. ಸಂವಿಧಾನದ ವಿರುದ್ಧ ಇರುವ ಮನಸ್ಸುಗಳಿಗೆ ಇಂತಹ ಆಲೋಚನೆ ಬಂದು ವ್ಯವಸ್ಥಿತ ಸಂಚನ್ನು ರೂಪಿಸುತ್ತಾರೆ. ಹಾಗಾಗಿ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ದಲಿತರಿಗೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಬದಲಾವಣೆ ತರಲು ಸಾಧ್ಯ. ಹಾಗಾಗಿ ನನ್ನ ಅಡಳಿತವಾಧಿಯಲ್ಲಿ ದಲಿತರಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು. ಎಸ್ಸಿಪಿ ಟಿಎಸ್ಪಿ ಯೋಜನೆಗಳಲ್ಲಿ ಐದು ವರ್ಷದಲ್ಲಿ 1.12 ಲಕ್ಷ ಕೋಟಿ ರೂ. ನೀಡಲಾಯಿತು. ಹಾಗೆ ಈ ಯೋಜನೆಗೆ ಕಾನೂನನ್ನು ತಂದು ಈ ವರ್ಷ ಪೂರ್ಣಗೊಳಿಸಲಾಗದ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸಿ ಖರ್ಚುಮಾಡುಂತೆ ಮಾಡಿದೆ. ಹಾಗೆ ಯಾವುದಾದರೂ ಅಧಿಕಾರಿಗಳು ತಲುಪಿಸುವಲ್ಲಿ ವಿಫಲರಾದರೆ ಅಂತಹರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮಾಡಿದೆ ಎಂದು ಹೇಳಿದರು.

ನನ್ನನ್ನು ಕೆಲವರು ಒರಟ ಎಂದು ಹೇಳುತ್ತಾರೆ. ಸ್ವಾಭಿಮಾನಿಗಳು ಒರಟಾಗಿಯೇ ಇರುತ್ತಾರೆ. ನಾವು ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದಿದ್ದೇವಾ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಸ್ವಾಭಿಮಾನ ಇದ್ದಿದ್ದರಿಂದಲೇ ನಾನು ಹಲವು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ರೇಷ್ಮೆ ಶಾಲು, ಟಿಪ್ಪು ಸುಲ್ತಾನ್ ಪೇಟಾ ತೊಡಿಸಿ ಅಂಬೇಡ್ಕರ್ ಪುತ್ಥಳಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ್, ಸಂಸದ ಆರ್.ಧ್ರುವನಾರಾಯಣ, ದಲಿತ ವೆಲ್‍ಫೇರ್ ಟ್ರಸ್ಟ್ ಗೌರವಾಧ್ಯಕ್ಷ ಶಾಂತರಾಜು, ಪ್ರೊ.ಟಿ.ಎಂ.ಮಹೇಶ್, ಸಾಹಿತಿ ತಲಕಾಡು ಚಿಕ್ಕರಂಗೇಗೌಡ, ಪೆರಿಯಾರ್ ವಾದಿ ಕಲೈ ಸೆಲ್ಫಿ, ಪೂಜಾರ್, ಮುಡಾ ಮಾಜಿ ಸದಸ್ಯ ಜಯಕುಮಾರ್, ರಾಜರತ್ನಂ, ಶಿವಪ್ಪ, ಶಿವಸ್ವಾಮಿ, ಸುರೇಂದ್ರ, ಕೆ.ಎಸ್.ಶಿವರಾಮು, ರಾಮಯ್ಯ, ನಂದಕುಮಾರ್, ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಹಿತಿ ಮಾಯಿಗೌಡ, ಪ್ರೊ.ಶಬ್ಬೀರ್ ಮುಸ್ತಾಫ, ಕಲೀಂ, ಮಂಜುಳ ಮಾನಸ, ಸಾಹಿತಿ ಸಿದ್ದಸ್ವಾಮಿ, ಮೈಸೂರು ಬಸವಣ್ಣ, ಸೋಸಲೆ ಮಹೇಶ್, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಅಕ್ಬರ್ ಅಲಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News