ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಹೊಂದಿದ್ದಾರೆ: ನಿಡುಮಾಮಿಡಿ ಸ್ವಾಮೀಜಿ
ಮೈಸೂರು,ಡಿ.30: ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗವನ್ನು ಹೊಂದಿದ್ದಾರೆ ಎಂದು ನಿಡುಮಾಮಿಡಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಭವಿಷ್ಯ ನುಡಿದರು.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಮೈಸೂರು ವಿವಿ ಯ ರಾಣಿಬಹದ್ದೂರು ಸಭಾಂಗಣದಲ್ಲಿ ರವಿವಾರ ಮೈಸೂರು ವಿಭಾಗೀಯ ಕೇಂದ್ರ, ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳು ನೌಕರರ ಪರಿಷತ್ತು ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಭಿನಂದನಾ ಸಮಾರಂಭ ಮತ್ತು ಪ್ರೊ.ಟಿ.ಎಂ.ಮಹೇಶ್ ರವರ 'ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆ ಮತ್ತು ಆಹಾರ ಭದ್ರತೆ' ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿ ನಂತರ ಮಾತನಾಡಿದರು.
ವೈಚಾರಿಕ, ಸಾಮಜಿಕ ಪರಿಕಲ್ಪನೆಯುಳ್ಳ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಸಿದ್ದರಾಮಯ. ಭಾರತದ ಇತಿಹಾಸದಲ್ಲಿ ಯಾರು ಕೈಗೊಳ್ಳದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಅವರ ಅವಧಿಯಲ್ಲಿ ಕೈಗೊಂಡ ಹಲವಾರು ಯೋಜನೆಗಳು ಜನಪರವಾದದ್ದು. ಯಾವುದೇ ಒಬ್ಬ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಯೋಜನೆಗಳನ್ನು ರೂಪಿಸುವ ಧೈರ್ಯ ಮಾಡುವುದಿಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಕೆಲವೆ ಸಮಯದಲ್ಲಿ ಹಲವು ಯೋಜನೆಗಳನ್ನು ಜಾರಿಮಾಡಿದರು. ಇಂತಹ ಧೈರ್ಯ ರಾಜ್ಯದ ಯಾವೊಬ್ಬ ಮುಖ್ಯಮಂತ್ರಿಗಳೂ ಕೈಗೊಂಡಿರಲಿಲ್ಲ, ಬಡವರು, ಶೋಷಿತರ ಬಗೆಗಿನ ಕಾಳಜಿ ಇಂತಹ ಯೋಜನೆಗಳು ಬರಲು ಕಾರಣ ಎಂದರು.
ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಾಗ ವಿರೋಧ ಪಕ್ಷದವರು, ಸ್ವಪಕ್ಷದವರು ಮತ್ತು ಮಾಧ್ಯಮದವರ ವಿರೋಧದ ನಡುವೆಯೂ ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 13 ಬಾರಿ ರಾಜ್ಯದ ಬಜೆಟ್ ಮಂಡಿಸಿದ ಕೀರ್ತಿ ಸಲ್ಲುತ್ತದೆ. ಇಷ್ಟೆಲ್ಲಾ ಮಾಡಿದ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಬೇಕಿತ್ತು. ಆದರೆ ನನ್ನ ಅಂತಃರಂಗ ಹೇಳುತ್ತಿದೆ ಮತ್ತೊಮ್ಮೆ ರಾಜ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಡಳಿತ ನಡೆಸಲಿದ್ದಾರೆ ಎಂದು ಹೇಳಿದರು.
ದೇವರಾಜ ಅರಸು ನಂತರ ಸಾಮಾಜಿ ನ್ಯಾಯದ ಪರಿಕಲ್ಪನೆ ಎತ್ತಿ ಹಿಡಿದವರು ಸಿದ್ದರಾಮಯ್ಯ. ಹಾಗಾಗಿ ನನಗೆ ಮತ್ತು ಜನತೆಗೆ ಇಷ್ಟವಾದ ಸಿಎಂ. ಶೋಷಿತರ ಪರವಾಗಿ ಆಡಳಿತ ನಡೆಸಿ ಮುಖ್ಯಮಂತ್ರಿ. ಹಾಗಂತ ಇತರರನ್ನು ಕಡೆಗಣಿಸಿದರು ಎಂದು ಹೇಳುತ್ತಿಲ್ಲ. ಉಳ್ಳವರ ಪಾಲಾಗುತ್ತಿದ್ದ ಸರ್ಕಾರದ ಯೋಜನೆಗಳನ್ನು ಶೋಷಿತರಿಗೆ ತಲುಪಿಸುವ ಜವಾಬ್ದಾರಿ ಹೊತ್ತವರು. ಜನರ ಜೊತೆಗೆ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಮುಖ್ಯಮಂತ್ರಿ ಎಂದು ಬಣ್ಣಿಸಿದರು.
ಪ್ರಸ್ತುತ ಆಡಳಿತದಲ್ಲಿ ಮೌಢ್ಯ ಕಂದಾಚಾರಗಳಿಗೆ ಬೆಲೆ ಕೊಡುತ್ತಿರುವ ಸಂದರ್ಭದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದವರು ಸಿದ್ದರಾಮಯ್ಯ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದನ್ನು ಧಿಕ್ಕರಿಸಿ 16 ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಐದು ವರ್ಷ ಸಂಪೂರ್ಣ ಆಡಳಿತ ನಡೆಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಜೆ.ಎಚ್.ಪಟೇಲರು ಜಾತ್ಯಾತೀತ ಮನೋಭಾವ ಉಳ್ಳವರು. ಆದರೆ ಅವರೇ ಚಾಮರಾಜನಗರಕ್ಕೆ ಹೋಗುವ ಧೈರ್ಯ ಮಾಡಲಿಲ್ಲ. ಒಂದು ರೀತಿಯಲ್ಲಿ ಸಾಂಸ್ಕೃತಿಕ ಸಂಚನ್ನು ವೈದಿಕ ಸಾಹಿಗಳು ಹಿಂದಿನಿಂದಲೂ ರೂಡಿಸಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು.
ರಾಜಯಕೀಯ ಸಂಚು ಹೇಗೆ ನಡೆಯುತ್ತದೊ ಹಾಗೆ ವೈದಿಕ ಶಾಹಿಗಳು ನಮ್ಮಲ್ಲಿ ಕಂದಾಚಾರ, ಮೌಢ್ಯದಂತಹ ಕೆಟ್ಟ ಮನಸ್ಥಿತಯನ್ನು ಬಿತ್ತಿವೆ. ಹಾಗಾಗಿ ಇಂತಹ ಸಾಂಸ್ಕೃತಿಕ ಸಂಚುಗಳನ್ನು ರೂಪಿಸುತ್ತಾರೆ. ಶೈವಪಥದ ದೇವಸ್ಥಾನಗಳು ಎಲ್ಲಿ ಇವೆಯೊ ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಬಿಂಬಿಸಿದ್ದಾರೆ. ಚಾಮರಾಜನಗರದಲ್ಲಿ ಮಲೈಮಹದೇಶ್ವರ, ಚಾಮರಾಜೇಶ್ವರ ದೇವಸ್ಥಾನಗಳಿವೆ. ಇವೆಲ್ಲ ಶೈಪ ಪಂಥಕ್ಕೆ ಸೇರಿದವುಗಳು. ಇಲ್ಲಿಗೆ ರಾಜ್ಯದ ಮುಖ್ಯಮಂತ್ರಿ ಭೇಟಿ ನೀಡಿದರೆ ಅಲ್ಲಿನ ಅಭಿವೃದ್ಧಿಯಾಗುತ್ತದೆ ಎಂಬ ಒಳ ಸಂಚನ್ನು ರೂಪಿಸಿ ಇಂತಹ ಕೆಟ್ಟ ಪ್ರವೃತ್ತಿಯನ್ನು ಸಮಾಜದ ಮೇಲೆ ವೈದಿಕಶಾಹಿಗಳು ಹೇರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.