ಚುನಾವಣೆಗಿಂತ ಮೊದಲು ರಾಮ ಮಂದಿರ ನಿರ್ಮಿಸಿ, ಮುಂದೆ ಬಹುಮತ ಬಾರದಿದ್ದರೆ ಕಷ್ಟ: ಮೋದಿ ಸರಕಾರಕ್ಕೆ ಪೇಜಾವರಶ್ರೀ ಒತ್ತಾಯ

Update: 2018-12-31 11:34 GMT

ವಿಜಯಪುರ, ಡಿ.31: ‘‘ಅಧಿಕಾರಕ್ಕೆ ಬರುವ ಮುಂಚೆ ಅನೇಕ ಉಪನ್ಯಾಸ, ಚುನಾವಣಾ ರ್ಯಾಲಿಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಭರವಸೆ ನೀಡಿದ್ದಾರೆ. ಆ ಭರವಸೆಗಳನ್ನು ಮುಂಬರುವ ಸಂಸತ್ ಚುನಾವಣೆಗಿಂತ ಮುಂಚೆ ಈಡೇರಿಸಿ. ಈಗ ಸರ್ಕಾರವಿದೆ, ಬಹುಮತವೂ ಇದೆ, ಮುಂದೆ ಬಹುಮತ ಬಾರದೇ ಇದ್ದರೆ ನೀಡಿದ ಭರವಸೆ ಈಡೇರಿಸಲು ಸಾಧ್ಯವೇ?’’ ಹೀಗೆಂದು ಕೇಂದ್ರ ಬಿಜೆಪಿ ಸರಕಾರವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಕಗ್ಗೋಡಕ್ಕೆ ಆಗಮಿಸಿದ್ದ ಸಂದರ್ಭ ಮಾಧ್ಯಮ ಸಂವಾದ ನಡೆಸಿದ ಸ್ವಾಮೀಜಿ ಮಾತನಾಡಿದರು.

ನಾವು ರಾಮ ಮಂದಿರ ನಿರ್ಮಾಣಕ್ಕಾಗಿ ಐದು ವರ್ಷ ಕಾದಿದ್ದೇವೆ. ಈಗ ಒತ್ತಾಯ ಮಾಡುತ್ತಿದ್ದೇವೆ, ಮಾಡಬಹುದು ಎಂಬ ಆಶ್ವಾಸನೆಗಳು ಈಡೇರಿಲ್ಲ. ಆದರೆ ರಾಮ ಮಂದಿರ ನಿರ್ಮಾಣಕ್ಕೆ ಇದು ಸೂಕ್ತ ಸಮಯ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯ ಸುಪ್ರೀಂಕೋರ್ಟ್‌ನಲ್ಲಿದ್ದರೂ ಸರಕಾರ ಸುಗ್ರೀವಾಜ್ಞೆ ಹೊರಡಿಸಬಹುದು ಎಂದು ಅನೇಕ ಹಿರಿಯ ಕಾನೂನು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿ, ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ನುಡಿದರು.

ರಾಮ ಮಂದಿರ ನಿರ್ಮಾಣ ವಿಚಾರವು ಧರ್ಮ ಸಂಸತ್‌ನಲ್ಲಿ ಈಗಾಗಲೇ ಚರ್ಚೆಯಾಗಿದೆ. ಈ ಕಾರಣಕ್ಕಾಗಿಯೇ ನಾವು ಚುನಾವಣೆಯವರೆಗೆ ರಾಮ ಮಂದಿರ ನಿರ್ಮಾಣಕ್ಕೆ ಗಡುವು ನೀಡುತ್ತಿದ್ದೇವೆ. ತಾನು ನೀಡಿದ ಮಾತನ್ನು ಕೇಂದ್ರ ಸರ್ಕಾರ ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.

ಸರ್ಕಾರವೇ ಸೌಹಾರ್ದ ಸಭೆ ಕರೆಯಲಿ
ಹಿಂದೂ-ಮುಸ್ಲಿಮ್ ಸಮಾಜಗಳ ಸೌಹಾರ್ದ ಸಭೆಯನ್ನು ಸರ್ಕಾರವೇ ಕರೆಯುವುದು ಸೂಕ್ತ. ಈ ಹಿಂದೆ ನಾವು ಸಭೆ ನಡೆಸಿದ್ದೇವೆ. ಕೃಷ್ಣಕಾಂತ ಉಪರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಸಭೆ ಕರೆದಿದ್ದೆ. ಈಗ ಪುನಃ ಅದೇರೀತಿ ಸಭೆಯನ್ನು ನಾನು ಕರೆಯುವುದು ಸೂಕ್ತವಲ್ಲ. ಕೇಂದ್ರ ಸರ್ಕಾರವೇ ಸೌಹಾರ್ದ ಸಭೆ ಕರೆಯುವುದು ಸೂಕ್ತ ಎಂದು ಸ್ವಾಮೀಜಿ ಸಲಹೆ ನೀಡಿದರು.

ಸರ್ಕಾರವೇ ಮುಸ್ಲಿಮ್ ಧಾರ್ಮಿಕ ಮುಖಂಡರನ್ನು ಕರೆಸಲಿ, ನಮ್ಮನ್ನು ಕರೆಸಲಿ, ಸೌಹಾರ್ದ ಹೆಜ್ಜೆಯನ್ನು ಸರ್ಕಾರವೇ ಇರಿಸಬೇಕು, ನಾನು ಕರೆಯುವುದು ಸೂಕ್ತವಲ್ಲ, ಸರ್ಕಾರ ಕರೆದರೆ ನಾವು ಭಾಗವಹಿಸುತ್ತೇವೆ ಎಂದು ಅವರು ಹೇಳಿದರು.

ಪ್ರೊ.ಭಗವಾನ್ ಮಠಕ್ಕೆ ಬರಲಿ

ಶ್ರೀರಾಮನ ಬಗ್ಗೆ ಪ್ರೊ.ಭಗವಾನ್ ಮೊದಲಾದವರು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ. ಈ ಹಿಂದೆಯೂ ಈ ಬಗ್ಗೆ ಬಹಿರಂಗ ಚರ್ಚೆ ಮೈಸೂರಿನಲ್ಲಿ ಕರೆಯಲಾಗಿತ್ತು. ಆದರೆ ಸರ್ಕಾರವು ಕಾನೂನು-ಸುವ್ಯವಸ್ಥೆಯಿಂದಾಗಿ ಅವಕಾಶ ನೀಡಿರಲಿಲ್ಲ. ಆದರೆ ಪ್ರೊ.ಭಗವಾನ್ ಅವರನ್ನು ನಾನು ವೈಯುಕ್ತಿಕವಾಗಿ ಮಠಕ್ಕೆ ಆಗಮಿಸಿ ಎಂದು ಆಹ್ವಾನಿಸುತ್ತೇನೆ, ಅವರು ಒಬ್ಬರೇ ಬಂದು ನನ್ನೊಡನೆ ಚರ್ಚೆ ಮಾಡಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ಒಂದು ವೇಳೆ ಅವರು ಚರ್ಚೆಗೆ ಬಾರದೇ ಇದ್ದರೆ ಅವರಿಗೆ ಧೈರ್ಯವಿಲ್ಲ ಎಂದೇ ತಿಳಿಯುತ್ತೇನೆ ಎಂದರು.

ರೈತ-ರಾಮ ಎರಡೂ ಮುಖ್ಯ
 ರೈತ ಹಾಗೂ ರಾಮ ಎರಡೂ ಮುಖ್ಯ, ರಾಮ ಸ್ವಾಭಿಮಾನದ ಪ್ರಶ್ನೆಯಾದರೆ, ರೈತ ದೇಶದ ಪ್ರಶ್ನೆ. ಸರ್ಕಾರಗಳು ರೈತರ ಬಗ್ಗೆ ಕಾಳಜಿ ತೋರಬೇಕು, ಈ ಎರಡೂ ವಿಷಯಗಳನ್ನು ನಾನು ಜೊತೆಗೆ ಒಯ್ಯುತ್ತೇನೆ, ರೈತರು ಆರ್ಥಿಕವಾಗಿ ಸದೃಢವಾಗಿಸುವ ಎಲ್ಲ ಪ್ರಯತ್ನಗಳನ್ನು ಸರ್ಕಾರ ಗಂಭೀರವಾಗಿ ಕೈಗೊಳ್ಳಬೇಕಿದೆ ಎಂದರು.

ಕೇಂದ್ರ ಸರ್ಕಾರದಿಂದ ಅಚ್ಛೇ ದಿನ ಬಂದಿದಿವೇಯೇ? ಕೇಂದ್ರ ಸರ್ಕಾರದ ಆಡಳಿತ ವೈಖರಿ ತೃಪ್ತಿ ತಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ನಾನು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ, ನೀವು ರಾಜ್ಯ ಸರ್ಕಾರದ ವೈಖರಿಗೆ ಏಕೆ ಪ್ರಶ್ನಿಸುವುದಿಲ್ಲ, ಅದನ್ನು ಕೇಳಿ ಎಂದ ಪೇಜಾವರಶ್ರೀ, ರಾಜ್ಯ ಸರ್ಕಾರದಿಂದ ಒಳ್ಳೆಯ ಯೋಜನೆ ರೂಪಿತವಾಗುತ್ತಿಲ್ಲ, ಕೇಂದ್ರ ಸರ್ಕಾರದಲ್ಲಿ ಕೆಲವೊಂದು ಯೋಜನೆಗಳು ತನಗೆ ಸಂತೃಪ್ತಿ ತಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News