ಪ್ರಕೃತಿ ವಿಕೋಪ : 300 ಕೋಟಿ ರೂ. ಬಿಡುಗಡೆಗೆ ಮನವಿ; ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ನಿರ್ಧಾರ
ಮಡಿಕೇರಿ, ಡಿ. 31 : ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಅಪಾರ ನಷ್ಟ ಉಂಟಾಗಿದ್ದು, ಈ ಸಂಬಂಧ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ ಇತರ ಮೂಲ ಸೌಲಭ್ಯಗಳಿಗೆ 300 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ತಿಳಿಸಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಜಿ.ಪಂ.ಸರ್ವಪಕ್ಷ ನಿಯೋಗವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಹೆಚ್ಚಿನ ಹಣ ಬಿಡುಗಡೆಗೆ ಮನವಿ ಮಾಡೋಣ ಎಂದು ಜಿ.ಪಂ. ಅಧ್ಯಕ್ಷರು ಸಲಹೆ ಮಾಡಿದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿ.ಪಂ.ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರು ಪ್ರಕೃತಿ ವಿಕೋಪಕ್ಕೆ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಈಗಾಗಲೇ ಸರ್ಕಾರ ಲೋಕೋಪಯೋಗಿ, ಜಿ.ಪಂ. ಎಂಜಿನಿಯರಿಂಗ್ ವಿಭಾಗ, ಸೆಸ್ಕ್ ಮತ್ತಿತರ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸುವಂತಾಗಬೇಕು ಎಂದು ಅವರು ಹೇಳಿದರು. ಪ್ರಕೃತಿ ವಿಕೋಪದಡಿ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಬಾನಂಡ ಪ್ರಥ್ಯು ಅವರು ಸಭೆಯ ಗಮನ ಸೆಳೆದರು.
ಕಸ್ತೂರಿ ರಂಗನ್ ವರದಿ ಸಂಬಂಧ ನನ್ನ ಹೆಗಲಿಗೆ ಹಾಕಿ ಎಂದು ಸಂಸದರು ಹೇಳಿದ್ದರು, ಆದರೆ ಈಗ ಏನು ಆಯಿತು ಎಂದು ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಕಾಲೆಳೆದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಬಾನಂಡ ಪ್ರಥ್ಯು ಅವರು ಕಸ್ತೂರಿ ರಂಗನ್ ವರದಿಗೆ ಎಲ್ಲರ ವಿರೋಧವಿದೆ. ಆದರೆ ಎತ್ತ ಸಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಬೇಕು. ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಈ ಸಂಬಂಧ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಬೇಕು. ರಸ್ತೆ ಅಭಿವೃದ್ಧಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ಅವರು ತಿಳಿಸಿದರು. ಸದಸ್ಯರಾದ ಶಿವು ಮಾದಪ್ಪ ಅವರು ಗೋಣಿಕೊಪ್ಪದಿಂದ ಟಿ.ಶೆಟ್ಟಿಗೇರಿ ವರೆಗೆ ರಸ್ತೆ ಕಾಮಗಾರಿ ನಡೆದಿದೆ. ಆದರೆ ಟಿ.ಶೆಟ್ಟಿಗೇರಿಯಿಂದ ಕುಟ್ಟದವರೆಗೆ ರಸ್ತೆ ಕಾಮಗಾರಿ ನಡೆದಿಲ್ಲ. ಕಾರಣವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಸದಸ್ಯರಾದ ಕವಿತಾ ಪ್ರಭಾಕರ್ ಅವರು ಭಾಗಮಂಡಲ-ಕರಿಕೆ ರಸ್ತೆ ತುಂಬಾ ಹದಗೆಟ್ಟಿದ್ದು, ಸರಿಪಡಿಸುವಂತಾಗಬೇಕು ಎಂದರು. ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ಇನ್ನು ಒಂದು ತಿಂಗಳಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯಾ ಅವರು ಕುಡಿಯುವ ನೀರು ಸಂಬಂಧ ಹೊಸದಾಗಿ ಕಾಮಗಾರಿ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸದಸ್ಯರಾದ ಅಬ್ದುಲ್ ಲತೀಫ್ ಅವರು ಜಿ.ಪಂ.ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸದಸ್ಯರ ಗಮನಕ್ಕೆ ಬರುತ್ತಿಲ್ಲ. ಕಾಮಗಾರಿಯು ಸಹ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿವೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕಾರ್ಯಪ್ಪ ಅವರು ತಿಳಿಸಿದರು.
ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಪೂರ್ಣಿಮಾ ಗೋಪಾಲ್ ಅವರು ವೈದ್ಯರು ಇಲ್ಲದಿದ್ದಲ್ಲಿ ಆಸ್ಪತ್ರೆಯನ್ನು ಮುಚ್ಚುವಂತೆ ಸಲಹೆ ನೀಡಿದರು. ಕರಿಕೆ ಸೇರಿದಂತೆ ಜಿಲ್ಲೆಯ ಹಲವು ಪ್ರಾಥಮಿಕ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ ಎಂದು ಹಲವು ಸದಸ್ಯರು ಸಭೆಯ ಗಮನ ಸೆಳೆದರು. ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಬ್ಯಾಡಗೊಟ್ಟದಲ್ಲಿ ಗಿರಿಜನ ಕುಟುಂಬಗಳು ಅನಾರೋಗ್ಯಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಗಮನ ಸೆಳೆದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ಪ್ರತೀ ವಾರ ವಿಶೇಷ ಆರೋಗ್ಯ ಶಿಬಿರ ಏರ್ಪಡಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಂದಿನ ವಾರ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಕೆಲವು ಆಸ್ಪತ್ರೆಗಳಲ್ಲಿ 5 ಕ್ಕಿಂತ ಹೆಚ್ಚು ವರ್ಷ ಒಂದೇ ಕಡೆ ಇರುವ ಶ್ರುಶ್ರೂಷಕರನ್ನು ನಿಯೋಜನೆ ಮೇಲೆ ವರ್ಗಾಯಿಸುವಂತೆ ಜಿ.ಪಂ.ಅಧ್ಯಕ್ಷರು ಸಲಹೆ ಮಾಡಿದರು.
ಸದಸ್ಯರಾದ ಶ್ರೀನಿವಾಸ ಅವರು ಹೆಬ್ಬಾಲೆ ಆಸ್ಪತ್ರೆ ಮಳೆಗೆ ಸೋರುತ್ತಿದೆ. ಇದನ್ನು ಸರಿಪಡಿಸುವಂತಾಗಬೇಕು ಎಂದು ಅವರು ಹೇಳಿದರು.
ಎಚ್1 ಎನ್1 ಸಂಬಂಧ 8 ಫಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಡಿಎಚ್‍ಒ ಅವರು ಮಾಹಿತಿ ನೀಡಿದರು.
ಅಯ್ಯಂಗೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡುವಂತಾಗಬೇಕು ಎಂದು ಕವಿತಾ ಪ್ರಭಾಕರ್ ಅವರು ಒತ್ತಾಯಿಸಿದರು.
ಈ ಸಂಬಂಧ ಸೂಕ್ತ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು. ಜಿ.ಪಂ. ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರೋಜಮ್ಮ, ಸದಸ್ಯರಾದ ಮೂಕೊಂಡ ಪಿ.ಸುಬ್ರಮಣಿ, ಭವ್ಯ, ಮಹೇಶ್ ಗಣಪತಿ, ಪಂಕಜಾ, ಎಂ.ಬಿ.ಸುನಿತಾ, ಲೀಲಾವತಿ, ಕೆ.ಕೆ.ಕುಮಾರ, ಸಿ.ಪಿ.ಪುಟ್ಟರಾಜು, ಬಿ.ಜೆ.ದೀಪಕ್, ಕೆ.ಆರ್.ಮಂಜುಳ ಇತರರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.