×
Ad

ನಗರಾಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಶಿಲ್ಪಾರಾಜಶೇಖರ್

Update: 2018-12-31 18:48 IST

ಚಿಕ್ಕಮಗಳೂರು, ಡಿ.31: ನಗರದ ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಸಲಹೆ ಸಹಕಾರ ನೀಡಬೇಕೆಂದು ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ತಿಳಿಸಿದರು.

ಸೋಮವಾರ ನಗರಸಭೆ ಸಭಾಂಗಣದಲ್ಲಿ ಎರಡನೇ ಹಂತದ ಬಜೆಟ್ ಪೂರ್ವ ಸಿದ್ಧತಾ ಸಾರ್ವಜನಿಕ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರಕ್ಕೆ 24 ಗಂಟೆ ನೀರು ನೀಡಲು  ಅಮೃತ್ ಯೋಜನೆ ಕಾಮಗಾರಿ ಆರಂಭವಾಗಿದ್ದು, ಮನೆಗಳಿಗೆ ನಲ್ಲಿ ಸಂಪರ್ಕನೀಡಿ, ಮುಖ್ಯ ರಸ್ತೆಯ ಪೈಪ್ ಲೈನ್ ಕೆಲಸ ಮುಗಿದ ತಕ್ಷಣ ಕೆಲವು ವಾರ್ಡ್‍ಗಳಿಗೆ ನೀರು ಪೂರೈಸಲಾಗುವುದು. 6 ತಿಂಗಳ ಒಳಗೆ ಇದರ ಸಂಪೂರ್ಣ ಕಾಮಗಾರಿ ಮುಗಿಯಲಿದ್ದು, ಈ ಯೋಜನೆಯಡಿಯಲ್ಲಿ ನಗರಕ್ಕೆ ದಿನದ 24 ಗಂಟೆಯೂ ನೀರು ಪೂರೈಕೆಯಾಗಲಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿರುವ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ರತ್ನಗಿರಿ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಗಳಲ್ಲಿ ನಿಲ್ಲಿಸುವ 4 ಚಕ್ರ ವಾಹನಗಳ ಪಾರ್ಕಿಂಗ್‍ಗೆ ಒಂದು ಗಂಟೆಗೆ 10 ರೂ. ನಂತರ ಒಂದೊಂದು ಗಂಟೆಗೆ 5 ರೂ. ನಂತೆ ಶುಲ್ಕ ವಸೂಲಾತಿ ಮಾಡಲು ಟೆಂಡರ್ ಕರೆಯಲಾಗುವುದು ಎಂದ ಅವರು, ಹೊಸವರ್ಷ ಆಚರಣೆಯಲ್ಲಿ ಪಟಾಕಿ, ಪ್ಲಾಸ್ಟಿಕ್‍ನಿಂದ ಸ್ವಚ್ಛತೆ ಹಾಳಾಗಲಿದೆ. ಡಿ.ಜೆ ಧ್ವನಿವರ್ಧಕದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ನಾಗರಿಕರು, ಯುವಜನತೆ ಎಚ್ಚರ ವಹಿಸಬೇಕೆಂದರು.

ಹಿರಿಯ ನಾಗರಿಕ ನಂಜುಂಡರಾವ್ ಮಾತನಾಡಿ, ನಗರದಲ್ಲಿರುವ ಪಾರ್ಕ್‍ಗಳ ಅಭಿವೃದ್ಧಿಗೆ ಸ್ಥಳೀಯವಾಗಿ 5 ಜನರ ಕಮಿಟಿ ಮಾಡಬೇಕು. ಇದರಿಂದ ಪಾರ್ಕ್‍ಗಳ ಸ್ವಚ್ಛತೆ ಕಾಪಾಡುವುದರ ಜೊತೆಗೆ ನಗರಸಭೆಗೂ ಹೆಚ್ಚು ಅನುಕೂಲವಾಗಲಿದೆ ಎಂದರು.

ಡಾ.ಸುಂದರ್‍ಗೌಡ ಮಾತನಾಡಿ, ನಗರದ ರಸ್ತೆಗಳನ್ನು ಶೀಘ್ರದಲ್ಲಿಯೆ ಸರಿಪಡಿಸಬೇಕು. ಬೀದಿ ದೀಪಗಳನ್ನು ಸರಿಯಾಗಿ ಹಾಕಬೇಕು. ಖಾಲಿ ನಿವೇಶಗಳಲ್ಲಿ ಕಸ ಹಾಕದಂತೆ ಕ್ರಮವಹಿಸಿ ಸ್ವಚ್ಛತೆ ಕಾಪಾಡಬೇಕೆಂದು ತಿಳಿಸಿದರು. ಗೌರಿ ಕಾಲುವೆಯ ನಾಗರಿಕರೊಬ್ಬರು ಮಾತನಾಡಿ, ಗೌರಿಕಾಲುವೆಯಲ್ಲಿ ಹಂದಿ, ಸೊಳ್ಳೆ, ಮತ್ತು ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು ಮಾರಣಾಂತಿಕ ಖಾಯಿಲೆಗಳು ಹರಡುತ್ತಿವೆ ಮುಂಜಾಗೃತ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸಿ ಔಷಧ ಸಿಂಪಡಿಸಬೇಕು ಮನೆಗಳಲ್ಲಿ ನೆಡೆಯುವ ಸಭೆ ಸಮಾರಂಭಗಳ ಊಟದ ತಟ್ಟೆ, ಲೋಟ ಮತ್ತು ಕಸವನ್ನು ರಾಜಕಾಲುವೆಗೆ ಸುರಿಯುತ್ತಿದ್ದಾರೆ ಇದನ್ನು ತಪ್ಪಿಸಬೇಕು, ತಿಲಕ್ ಪಾರ್ಕನ್ನು ಅಭಿವೃದ್ಧಿ ಪಡಿಸಬೇಕು, ವಿಜಯಪುರ ಮತ್ತು ತಿಲಕ್‍ಪಾರ್ಕ್ ಬಳಿ ಪೋಲಿ ಹುಡುಗರು ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಾರೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತೆ ತುಷಾರಮಣಿ ಸದಸ್ಯರಾದ ಟಿ.ರಾಜಶೇಖರ್, ಮುತ್ತಯ್ಯ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News