×
Ad

ಮಧುಕರಶೆಟ್ಟಿ ಐಪಿಎಸ್ ಸಮವಸ್ತ್ರದ ಮಾನವತಾವಾದಿ: ಗೌಸ್ ಮೊಹಿದ್ದೀನ್

Update: 2018-12-31 20:50 IST

ಚಿಕ್ಕಮಗಳೂರು, ಡಿ.31: ಪೊಲೀಸ್ ಅಧಿಕಾರಿಯೊಬ್ಬ ಬಡವರು, ಶೋಷಿತರು, ಕಾರ್ಮಿಕರು, ಅಸಹಾಯಕರ ಪರ ಜನಪರವಾಗಿ ಹೇಗೆ ಕಾರ್ಯ ನಿರ್ವಹಿಸಬಹುದೆಂಬುದನ್ನು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟ ಧೀಮಂತ ವ್ಯಕ್ತಿ ಮಧುಕರ ಶೆಟ್ಟಿ. ಅವರು ಪೊಲೀಸ್ ಸಮವಸ್ತ್ರದಲ್ಲಿದ್ದ ಮಹಾನ್ ಮಾನವತಾ ವಾದಿ ಎಂದು ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್ ಅಭಿಪ್ರಾಯಿಸಿದ್ದಾರೆ.

ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಕೋಮು ಸೌಹಾರ್ದ ವೇದಿಕೆ, ದಲಿತಸಂಘರ್ಷ ಸಮಿತಿ ಹಾಗೂ ಪ್ರಗತಿಪದ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ದಿವಂಗತ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆಗಮಿಸಿ ಕಾರ್ಯನಿರ್ವಹಿಸಿದ್ದ ಅವರ ಅವಧಿಯನ್ನು ಜಿಲ್ಲೆಯ ಜನತೆ ಎಂದೂ ಮರೆಯಲಾರರು. ಬಡ ಬಗ್ಗರು, ಹೋರಾಟಗಾರರ ಸಮಸ್ಯೆಗಳ ಬಗ್ಗೆ ಅವರು ಕಾನೂನನ್ನು ಬದಿಗಿಟ್ಟು ಮಾನವೀಯ ಕಣ್ಣು, ಕಿವಿಗಳ ಮೂಲಕ ಸಮಸ್ಯೆ ಆಲಿಸಿ ಸ್ಪಂದಿಸುತ್ತಿದ್ದ ಅವರ ಸೇವೆ ರಾಜ್ಯದ ಜನರಿಗೆ ಅಗತ್ಯವಿತ್ತು. ಅಂತಹ ಅಧಿಕಾರಿ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿಯಾಗಿದೆ. ಅಂತಹ ಅಧಿಕಾರಿಯ ಸೇವೆ ಮತ್ತೊಬ್ಬರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಜಿಲ್ಲೆಯ ಶೋಷಿತ ಜನರ ಪರವಾಗಿದ್ದರು. ಜಿಲ್ಲೆಯ ನೂರಾರು ಭೂ ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಿದ್ದ ಅವರು, ಸಾರಗೋಡು ಗ್ರಾಮದಲ್ಲಿ ಭೂಮಿ ಕಳೆದುಕೊಂಡಿದ್ದವರ ಅಳಲಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಇಡೀ ಭೂಲಕರನ್ನು ಎದುರು ಹಾಕಿಕೊಂಡಿದ್ದರು. ಅವರ ಬೆದರಿಕೆ, ಒತ್ತಡವನ್ನು ಕ್ಯಾರೆ ಎನ್ನದೇ ಬೀದಿಪಾಲಾಗಲಿದ್ದ 32 ಬಡ ಕುಟುಂಬಗಳಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರ ಸಹಾಯದಿಂದ ಭೂ ಮಾಲಕನಿಂದ ಒತ್ತುವರಿಯಾಗಿದ್ದ ಸರಕಾರಿ ಭೂಮಿ ಕಸಿದುಕೊಂಡು ತಲಾ ಎರಡು ಎಕರೆ ಭೂಮಿ ಹಂಚಿಕೆ ಮಾಡಿ ಮಾನವೀಯತೆ ಮೆರೆದಿದ್ದರು. ಅಂತಹ ಜನಪರ ಅಧಿಕಾರಿಯನ್ನು ಸರಕಾರ ಪ್ರಭಾವಿಗಳಿಗೆ ಮಣಿದು ಕೆಲಸಕ್ಕೆ ಬಾರದ ಹುದ್ದೆಗೆ ನೇಮಿಸಿ ಅವರ ಜನಪರ ಕಳಕಳಿಗೆ ಅವಮಾನ ಮಾಡಿತ್ತು. ರಾಜಕಾರಣಿಗಳು ಮಾಡಬೇಕಿದ್ದ ಕೆಲಸವನ್ನು ಮಧುಕರಶೆಟ್ಟಿ ಅವರು ಓರ್ವ ಪೊಲೀಸ್ ಅಧಿಕಾರಿಯಾಗಿ ಮಾಡಿ ತೋರಿಸಿದ್ದರು. ಇಂತಹ ಅಧಿಕಾರಿಯ ಸಾವಿಗೆ ಸರಕಾರ, ಭೂ ಮಾಲಕರು ಹಾಗೂ ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ದಲಿತ ಹೋರಾಟಗಾರ ರಾಜರತ್ನಂ ಅವರ ಅವಧಿಯಲ್ಲಿ ಪೊಲೀಸ್ ಠಾಣೆಗಳು ಜನಸ್ನೇಹಿಗಳಾಗಿದ್ದವು. ಪೊಲೀಸ್ ಠಾಣೆಗಳನ್ನು ನೋಡದವರು ನಿರ್ಭೀತಿಯಿಂದ ಠಾಣೆಗೆ ಬಂದು ದೂರು ನೀಡುವ ಪರಿಸ್ಥಿತಿ ನಿರ್ಮಾಣವಾಗಿದ್ದವು. ಸರಕಾರಿ ಸವಲತ್ತುಗಳಿಗಾಘಿ ಬಂದ ಎಷ್ಟೋ ಜನರಿಗೆ ಖುದ್ದು ಕೆಲಸ ಮಾಡಿಕೊಂಡುತ್ತಿದ್ದರು. ನಿರ್ಗತಿಕರಿಗೆ ತಮ್ಮ ವೇತನದಲ್ಲಿ ಧನ ಸಹಾಯ ಮಾಡುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ಅಧಿಕಾರಿಯ ಕಾರ್ಯ ಕ್ಷಮತೆ ಇಂದಿನ ಅಧಿಕಾರಿಗಳಲ್ಲಿ ಕಾಣಲು ಸಾಧ್ಯವಿಲ್ಲದಿರುವುದು ವಿಪರ್ಯಾಸ ಎಂದು ವಿಷಾದಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕೃಷ್ಣಮೂರ್ತಿ ಮಾತನಾಡಿದರು. ಕೋಸೌ ವೇದಿಕೆಯ ಗಣೇಶ್, ಪುಟ್ಟಸ್ವಾಮಿ, ಮುನೀರ್, ನೌಜವಾನ್, ರೈತ ಸಂಘದ ಕೃಷ್ಣೇಗೌಡ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News