“ರಫೇಲ್ ಕಡತಗಳು ನನ್ನ ಬೆಡ್ ರೂಂನಲ್ಲಿದೆ ಎಂದು ಪಾರಿಕ್ಕರ್ ಹೇಳಿದರು”

Update: 2019-01-02 08:38 GMT

ಹೊಸದಿಲ್ಲಿ, ಜ.2: ರಫೇಲ್ ಒಪ್ಪಂದದ ಕುರಿತಾದ ಕಡತಗಳು ‘ತನ್ನ ಬೆಡ್‍ರೂಂ'ನಲ್ಲಿವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿದ್ದರೆಂದು ಗೋವಾದ ಆರೋಗ್ಯ ಸಚಿವರದ್ದೆಂದು ಹೇಳಲಾದ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಇದೇ ಕಾರಣಕ್ಕಾಗಿಯೇ ಸರಕಾರ ಈ ಒಪ್ಪಂದದ ಕುರಿತಂತೆ ಜಂಟಿ ಸದನ ಸಮಿತಿಯ ತನಿಖೆಗೆ ಅನುಮತಿಸುತ್ತಿಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಧ್ವನಿಮುದ್ರಿಕೆಯಲ್ಲಿನ ಧ್ವನಿ ಗೋವಾದ ಆರೋಗ್ಯ ಸಚಿವ ವಿಶ್ವಜೀತ್ ರಾಣೆಯವರದ್ದೆಂದು ಹೇಳಲಾಗುತ್ತಿದೆ. ಆದರೆ ಈ ಧ್ವನಿಮುದ್ರಿಕೆಯನ್ನು ತಿರುಚಲಾಗಿದೆ ಎಂದು ಹೇಳಿರುವ ರಾಣೆ, ಮುಖ್ಯಮಂತ್ರಿ ಪಾರಿಕ್ಕರ್ ಯಾವತ್ತೂ ರಫೇಲ್ ಬಗ್ಗೆ ಉಲ್ಲೇಖಿಸಿಲ್ಲ ಎಂದಿದ್ದಾರೆ.

ಭಾರತ ಮತ್ತು ಫ್ರಾನ್ಸ್ ನಡುವೆ ರಫೇಲ್ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಪಾರಿಕ್ಕರ್ ರಕ್ಷಣಾ ಸಚಿವರಾಗಿದ್ದರು.

“ಎಲ್ಲಾ ರಫೇಲ್ ಕಡತಗಳೂ ನನ್ನ ಫ್ಲ್ಯಾಟಿನಲ್ಲಿ, ನನ್ನ ಬೆಡ್‍ರೂಂನಲ್ಲಿವೆ. ಆದುದರಿಂದ ಯಾರೂ ನನ್ನನ್ನು ನನ್ನ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿಲ್ಲವೆಂದು ಗೋವಾ ಸಚಿವ ಸಂಪುಟ ಸಭೆಯಲ್ಲಿ ಪಾರಿಕ್ಕರ್ ಹೇಳಿರುವುದು ಧ್ವನಿಮುದ್ರಿಕೆಯಲ್ಲಿದೆ'' ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಇಂದು ಸಂಸತ್ತಿನಲ್ಲಿ ರಫೇಲ್ ಒಪ್ಪಂದದ ಕುರಿತಾದ ಚರ್ಚೆ ನಡೆಯುವುದಕ್ಕಿಂತ ಸ್ವಲ್ಪವೇ ಮೊದಲು ಮೇಲಿನ ವಿಚಾರದ ಬಗ್ಗೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸುರ್ಜೇವಾಲ ಪತ್ರಕರ್ತರಿಗೆ ಧ್ವನಮುದ್ರಿಕೆಯೊಂದನ್ನು ಕೇಳಿಸಿದ್ದು ಅದರಲ್ಲಿ ವಿಶ್ವಜೀತ್ ರಾಣೆ ಅವರದ್ದೆಂದು ಹೇಳಲಾದ ಧ್ವನಿಯು ಇನ್ನೊಬ್ಬ ಅನಾಮಧೇಯ ವ್ಯಕ್ತಿಯೊಂದಿಗೆ ಮೂರು ಗಂಟೆಗಳ ಕಾಲ ನಡೆದ ಕ್ಯಾಬಿನೆಟ್ ಸಭೆಯ ವಿವರಗಳನ್ನು ತಿಳಿಸಿ ಅದನ್ನು ಗೌಪ್ಯವಾಗಿರಿಸಲು ಹೇಳುತ್ತಿದ್ದಾರೆ.

“ರಫೇಲ್‍ನ ಎಲ್ಲಾ ಮಾಹಿತಿ ನನ್ನ ಬೆಡ್‍ರೂಂನಲ್ಲಿದೆ' ಎಂದು ಸಭೆಯಲ್ಲಿ ಸಿಎಂ ಒಂದು ಆಸಕ್ತಿದಾಯಕ ಹೇಳಿಕೆ ನೀಡಿದರು ಎಂದು ರಾಣೆ ಹೇಳುತ್ತಿರುವುದು ಹಾಗೂ ಆ ಇನ್ನೊಬ್ಬ ವ್ಯಕ್ತಿ ``ನೀವೇನು ಹೇಳುತ್ತಿದ್ದೀರಿ?'' ಎಂದಾಗ ಸಚಿವ ``ಸಚಿವ ಸಂಪುಟದಲ್ಲಿ ನಿಮಗೆ ಆತ್ಮೀಯರಾಗಿರುವ ಇನ್ನೊಬ್ಬರಲ್ಲಿ ಈ ವಿಚಾರ ದೃಢೀಕರಿಸಬಹುದು. ಅವರು ಇದನ್ನೇ ಹೇಳಿದ್ದು. ರಫೇಲ್ ನ ಪ್ರತಿಯೊಂದು ಕಡತವೂ ತಮ್ಮ ಬೆಡ್‍ರೂಂನಲ್ಲಿದೆ ಎಂದು ಅವರು ಹೇಳಿದ್ದಾರೆ'' ಎಂದಿದ್ದಾರೆ.

``ರಫೇಲ್ ಕಡತಗಳು ಪಾರಿಕ್ಕರ್ ಅವರ ಬಳಿ ಏಕೆ ಅಡಗಿಸಿಡಲಾಗಿದೆ, ನಮಗೆ ಸತ್ಯ ತಿಳಿಯಬೇಕು'' ಎಂದು ಸುರ್ಜೇವಾಲ ಹೇಳಿದ್ದಾರೆ.

ಅತ್ತ ವಿಶ್ವಜೀತ್ ರಾಣೆ ಕೂಡ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಬಿಡುಗಡೆಗೊಳಿಸಿದ ಆಡಿಯೋ ತಿರುಚಲ್ಪಟ್ಟಿದೆ ಎಂದಿದ್ದಾರೆ. “ಸಚಿವ ಸಂಪುಟ ಮತ್ತು ಸಿಎಂ ನಡುವೆ ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಧ್ವನಿಮುದ್ರಿಕೆಯನ್ನು ತಿರುಚಿ ಕಾಂಗ್ರೆಸ್ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿದಿದೆ. ಪಾರಿಕ್ಕರ್ ರಫೇಲ್ ಬಗ್ಗೆ ಮಾತನಾಡಿಯೇ ಇಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದೇನೆ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News