×
Ad

ಶಿವಮೊಗ್ಗ: ಪೊಲೀಸ್ ಪೇದೆಗೆ ಬ್ಲೇಡ್‍ನಿಂದ ಮನಸೋಇಚ್ಚೆ ಇರಿದ ದುಷ್ಕರ್ಮಿಗಳು

Update: 2019-01-02 18:37 IST

ಶಿವಮೊಗ್ಗ, ಜ. 2: ಪೊಲೀಸ್ ಪೇದೆ ಮೇಲೆ ಇಬ್ಬರು ದುಷ್ಕರ್ಮಿಗಳು ಬ್ಲೇಡ್‍ನಿಂದ ಮನಸೋಇಚ್ಚೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ಮಂಜುನಾಥ್ ಹೊಸಮನಿ (27) ಗಂಭೀರಾಗಿ ಗಾಯಗೊಂಡ ಪೇದೆ ಎಂದು ಗುರುತಿಸಲಾಗಿದೆ. ಇವರು ತಾಲೂಕಿನ ಕುಂಸಿ ಗ್ರಾಮದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕುತ್ತಿಗೆ, ಕೈ, ಕಾಲು ಮೊದಲಾದೆಡೆ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿದ್ದಾರೆ. ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದ್ದ ಕಾರಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. 

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ನದೀಂ ಹಾಗೂ ನಜೀರ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆನ್ನಾಗಿದ್ದು,  ಈ ಕುರಿತಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ. 

ಘಟನೆ ಹಿನ್ನೆಲೆ: ಪೇದೆ ಮಂಜುನಾಥ ಹೊಸಮನಿಯವರು ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಕುಂಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕುಂಸಿ ಗ್ರಾಮದಲ್ಲಿಯೇ ನೆಲೆಸಿದ್ದಾರೆ. ಕರ್ತವ್ಯದ ಮೇಲೆ ಮಂಜುನಾಥರವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಕುಂಸಿ ಗ್ರಾಮಕ್ಕೆ ತೆರಳಲು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‍ಗೆ ಕಾದು ನಿಂತಿದ್ದರು. ಮಫ್ತಿ ಬಟ್ಟೆಯಲ್ಲಿದ್ದರು. 

ಈ ವೇಳೆ ಇವರಿದ್ದ ಸ್ಥಳಕ್ಕೆ ಆಗಮಿಸಿದ ದುಷ್ಕರ್ಮಿಗಳು, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ್, ಆರೋಪಿಗಳನ್ನು ಹಿಡಿಯಲೆತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಬಳಿಯಿದ್ದ ಬ್ಲೇಡ್‍ನಿಂದ ಮನಸೋಇಚ್ಚೆ ಇರಿದು ಪರಾರಿಯಾಗಿದ್ದಾರೆ. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಜೊತೆಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತ್ಯ ಎಸಗಿದ ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News