×
Ad

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್‌ನಲ್ಲಿ ದಿಢೀರ್ ಪ್ರತ್ಯಕ್ಷ

Update: 2019-01-02 18:39 IST

ಬೆಂಗಳೂರು, ಜ. 2: ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ, ಮೈತ್ರಿ ಸರಕಾರಕ್ಕೆ ‘ಆತಂಕ’ ಸೃಷ್ಟಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ.

ಡಿ.22ರಂದು ಸಂಪುಟ ಪುನಾರಚನೆ ಸಂದರ್ಭದಲ್ಲಿ ಸ್ಥಾನ ಕಳೆದುಕೊಂಡಿದ್ದ ರಮೇಶ್, ಏಳೆಂಟು ದಿನಗಳಿಂದ ಯಾರೊಬ್ಬರ ಕೈಗೂ ಸಿಗದೆ, ಮೊಬೈಲ್ ಫೋನ್ ಸಂಪರ್ಕಕ್ಕೂ ಸಿಗದೆ ಅಜ್ಞಾತವಾಗಿದ್ದರು. ನಿನ್ನೆ ತಡರಾತ್ರಿ ಗೋಕಾಕ್‌ನ ತನ್ನ ನಿವಾಸಕ್ಕೆ ಆಗಮಿಸಿದ ಜಾರಕಿಹೊಳಿ ಬೆಳಗ್ಗೆ 8ಗಂಟೆಯ ಸುಮಾರಿಗೆ ನಿವಾಸದಿಂದ ಹೊರಗೆ ತೆರಳಿದ್ದಾರೆಂದು ಗೊತ್ತಾಗಿದೆ.

ಮುಂಬೈ, ದಿಲ್ಲಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ, ತನ್ನ ಬೆಂಬಲಿಗ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ರಣತಂತ್ರ ರೂಪಿಸುತ್ತಿದ್ದರು. ಈ ಮಧ್ಯೆ ಅವರನ್ನು ಭೇಟಿಗೆ ಪ್ರಯತ್ನ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಸೇರಿ ಯಾರಿಗೂ ಅವರು ಸಿಕ್ಕಿರಲಿಲ್ಲ.

ಈ ಬೆಳವಣಿಗೆಗಳ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ‘ಬಿಜೆಪಿ ಸರಕಾರ ರಚಿಸಿದರೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲಿದ್ದಾರೆ’ ಎಂಬ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದರು. ಇದಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ’ ಎಂದು ಆರೋಪ ಮಾಡಿದ್ದರು.

ಇದೀಗ ರಮೇಶ್ ಜಾರಕಿಹೊಳಿ ದಿಢೀರ್ ಪ್ರತ್ಯಕ್ಷವಾಗಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ. ಗೋಕಾಕ್‌ನ ತನ್ನ ನಿವಾಸದಿಂದ ಬೆಳಗಾವಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಬೆಳಗಾವಿಯಲ್ಲಿ ಯಾರನ್ನು ಭೇಟಿ ಮಾಡಲಿದ್ದಾರೆಂಬುದು ನಿಗೂಢವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News