ರೈತರು ದಿಲ್ಲಿಯಲ್ಲೆ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ?: ಪ್ರಧಾನಿ ಮೋದಿಗೆ ದೇವೇಗೌಡ ಪ್ರಶ್ನೆ

Update: 2019-01-02 13:52 GMT

ಬೆಂಗಳೂರು, ಜ.2: ಸಾಲ ಮನ್ನಾ ವಿಚಾರದಲ್ಲಿ ರೈತರಿಗೆ ಕೊಟ್ಟ ಭರವಸೆಯನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉಳಿಸಿಕೊಳ್ಳಲಿಲ್ಲ ಎಂದು ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದ್ದಾರೆ.

‘ಮೋದಿ ಅವರೇ, ನಿಮ್ಮ ತೋರು ಬೆರಳು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರೆ, ಕಪ್ಪುಹಣ, ನೋಟು ಅಪನಗದೀಕರಣ, ಗಂಗಾ ನದಿ ಸ್ವಚ್ಛತೆ, ನದಿ ಜೋಡಣೆ, ರಾಮ ಮಂದಿರ ಇಂತಹ ಅನೇಕ ವಿಚಾರವಾಗಿ ಉಳಿದ ಬೆರಳುಗಳು ನಿಮ್ಮನ್ನೇ ಪ್ರಶ್ನಿಸುತ್ತಿವೆ. ರೈತರು ದಿಲ್ಲಿಯಲ್ಲೆ ಬೀಡು ಬಿಟ್ಟು ಪ್ರತಿಭಟನೆ ನಡೆಸಿದಾಗ ನೀವೇನು ಮಾಡಿದ್ದೀರಿ ಎಂದು ಒಮ್ಮೆ ನೆನಪಿಸಿಕೊಳ್ಳಿ ಎಂದು ದೇವೇಗೌಡರು ಟ್ವಿಟ್ ಮಾಡಿದ್ದಾರೆ.

‘ಮೋದಿ ಅವರೇ, ಕರ್ನಾಟಕ ರಾಜ್ಯದ ರೈತರ ಸಾಲಮನ್ನಾದ ಕುರಿತು ನಿಮ್ಮ ಲೇವಡಿಯ ಮಾತುಗಳನ್ನು ಗಮನಿಸಿದ್ದೇನೆ. ಕರ್ನಾಟಕದಲ್ಲಿ ಸಾಲಮನ್ನಾ ಪ್ರಕ್ರಿಯೆ ಜಾರಿಯಲ್ಲಿದ್ದು ಈಗಾಗಲೇ 60,000 ರೈತರ ಖಾತೆಗೆ ಹಣ ವರ್ಗಾವಣೆಯಾಗಿದೆ. ನಮ್ಮ ರಾಜ್ಯದ ರೈತರಿಗೆ ನೀಡಿರುವ ಭರವಸೆಯನ್ನು ಈಡೇರಿಸುವ ಬದ್ಧತೆ ನಮ್ಮಲ್ಲಿದೆ, ಆ ಮಾರ್ಗದಲ್ಲೇ ಸಾಗುತ್ತಿದ್ದೇವೆ ಎಂದು ದೇವೇಗೌಡರು ಟ್ವಿಟ್ ಮೂಲಕ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News