ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳಿಂದ ಬಸ್ ತಡೆದು ದಿಢೀರ್ ಪ್ರತಿಭಟನೆ

Update: 2019-01-02 14:04 GMT

ಮೂಡಿಗೆರೆ, ಜ.2: ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಪ್ರತಿದಿನ ಪ್ರಯಾಣಿಸಲು ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಸ್ ನಿರ್ವಾಹಕರು ತಡೆದು ಕೆಳಗಿಳಿಸುತ್ತಾರೆಂದು ಆರೋಪಿಸಿ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಎದುರು ನೂರಾರು ವಿದ್ಯಾರ್ಥಿಗಳು ಬುಧವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು. 

ವಿದ್ಯಾರ್ಥಿಗಳು ಕೆಲಕಾಲ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಮೂಡಿಗೆರೆ ಮತ್ತು ಚಿಕ್ಕಮಗಳೂರು ಬಸ್‍ನಿಲ್ದಾಣದಿಂದ ಹೊರಡುವ ಅನೇಕ ಬಸ್‍ಗಳಲ್ಲಿ ಪಾಸ್ ಇರುವ ವಿದ್ಯಾರ್ಥಿಗಳು ಪ್ರಯಾಣಿಸುವಾಗ ನಿರ್ವಾಹಕರು ವಿನಾಕಾರಣ ಬಸ್‍ನಿಂದ ಕೆಳಗಿಳಿಸುತ್ತಾರೆ. ಇಂತಹ ವರ್ತನೆ ನಿಲ್ಲಬೇಕು, ನಿರ್ವಾಹಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.   

ಸ್ಥಳಕ್ಕೆ ಕೆಎಸ್‍ಆರ್‍ಟಿಸಿ ಇನ್ಸ್‍ಪೆಕ್ಟರ್ ಸತೀಶ್ ಆಗಮಿಸಿ, ವಿದ್ಯಾರ್ಥಿಗಳ ದೂರು ಆಲಿಸಿದ ಬಳಿಕ ಯಾವುದೇ ಬಸ್‍ನಲ್ಲಿ ವಿದ್ಯಾರ್ಥಿಗಳಿಗೆ ಇನ್ನುಮುಂದೆ ತೊಂದರೆಯಾಗದಂತೆ ಎಲ್ಲಾ ನಿರ್ವಾಹಕರಿಗೂ, ಚಾಲಕರಿಗೂ ಕೂಡಲೇ ಸೂಚನಾಪತ್ರ ಕಳುಹಿಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ದೀಕ್ಷಿತ್, ಧನಿಕ್ ಕೋಡದಿಣ್ಣೆ, ಗಗನ್, ಚಿರಾಗ್, ಅನಿಲ್, ಶ್ವೇತಾ, ಸಂಧ್ಯಾ, ಬಜರಂಗದಳ ಅವಿನಾಶ್ ಹಾಗೂ ಸಾರ್ವಜನಿಕರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News