ಪಕ್ಷದ ಬಾಗಿಲು ಸದಾ ತೆರೆದಿದೆ: ಬಿಜೆಪಿ ಮುಖಂಡರು-ಕಾರ್ಯಕರ್ತರಿಗೆ ಡಿಕೆಶಿ ಆಹ್ವಾನ
ಬೆಂಗಳೂರು, ಜ.2: ಕಾಂಗ್ರೆಸ್ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇರುವ ಚನ್ನಪಟ್ಟಣ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ಸದಾ ತೆರೆದಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯನ್ನು ಹೊತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮುಕ್ತ ಆಹ್ವಾನ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿ.ಕೆ.ಶಿವಕುಮಾರ್, ತಾಲೂಕಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿ ಬಿಜೆಪಿ ಮುಖಂಡರ ಸ್ವಾರ್ಥ, ನಡೆ-ನುಡಿಯಿಂದಾಗಿ ಬೇಸತ್ತು ಹೋಗಿರುವುದಾಗಿ ಆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಬಳಿಯೇ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಕಾಂಗ್ರೆಸ್ಸಿಗೆ ಬರಲು ಉತ್ಸುಕರಾಗಿರುವುದಾಗಿಯೂ ಹೇಳಿದ್ದಾರೆ. ಅವರು ಯಾವಾಗ ಬೇಕಾದರೂ ಪಕ್ಷಕ್ಕೆ ಬರಬಹುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ನ್ಯಾಯ, ಜಾತ್ಯತೀತತೆ, ಕೋಮು ಸಾಮರಸ್ಯ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಏಕತೆಯಲ್ಲಿ ವೈವಿಧ್ಯತೆ, ದೇಶದ ಆಮೂಲಾಗ್ರ ಪ್ರಗತಿ ಕಾಂಗ್ರೆಸ್ಸಿನ ಮೂಲ ಮಂತ್ರ. ಇಲ್ಲಿ ಅನ್ಯಾಯ, ಸರ್ವಾಧಿಕಾರಿ ಧೋರಣೆಗೆ ಆಸ್ಪದವಿಲ್ಲ. ಎಲ್ಲರನ್ನೂ ಸಮಭಾವದಿಂದ ಕಾಣಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.