×
Ad

ರಾಜ್ಯಾದ್ಯಂತ ಎರಡು ಲಕ್ಷ ಮನೆ ನಿರ್ಮಾಣದ ಗುರಿ: ವಸತಿ ಸಚಿವ ಎಂಟಿಬಿ ನಾಗರಾಜ್

Update: 2019-01-02 19:42 IST

ಬೆಂಗಳೂರು, ಜ.2: ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಎರಡು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ನಗರದ ಕಾವೇರಿ ಭವನದಲ್ಲಿ ಕರ್ನಾಟಕ ಗೃಹ ಮಂಡಳಿ, ಕೊಳಚೆ ನಿರ್ಮೂಲನಾ ಮಂಡಳಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್‌ ಗಾಂಧಿ ಅವಾಸ್ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ ಮಾಡುವ ಗುರಿಯಿದೆ. ಇದುವರೆಗೂ 2.13 ಲಕ್ಷ ಮನೆಗಳನ್ನು ನಿರ್ಮಿಸಿದ್ದು, 1681 ನಿವೇಶನಗಳನ್ನ ಹಂಚಿಕೆ ಮಾಡಲಾಗಿದೆ ಎಂದರು.

ಬೆಂಗಳೂರಿನಲ್ಲಿ ಆರ್ಥಿಕ ದುರ್ಬಲ ವರ್ಗದವರಿಗಾಗಿ ‘1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1014.10 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಪ್ರತಿ ಮನೆಯ ಘಟಕ ವೆಚ್ಚ 8 ಲಕ್ಷದಂತೆ ಜಿಫ್ಲಸ್ 14 ಮಹಡಿಯವರೆಗೆ ನಿರ್ಮಿಸಲು ಉದ್ದೇಶಿಸಿದ್ದು, ಪ್ರಥಮ ಹಂತದಲ್ಲಿ 46,499 ಮನೆಗಳ ನಿರ್ಮಾಣಕ್ಕೆ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಹೇಳಿದರು.

2018-19 ರಲ್ಲಿ ನಗರ ಪ್ರದೇಶಗಳಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಬಿಎಂಪಿಯ 2 ಸಾವಿರ, ಉಳಿದ ಮಹಾನಗರ ಪಾಲಿಕೆಗಳಲ್ಲಿ 500 ಎಕರೆ, ನಗರಸಭೆ ಅಥವಾ ಪುರಸಭೆ ಪ್ರದೇಶದಲ್ಲಿ 250 ಹಾಗೂ ಇತರೆ ಪಟ್ಟಣ ಪ್ರದೇಶದಲ್ಲಿ 100 ಎಕರೆ ಜಮೀನು ವಸತಿಗಾಗಿ ಮೀಸಲಿಡಲು ಉದ್ದೇಶಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ 3, 942 ಕೋಟಿ ಅನುದಾನ ವಸತಿಗಾಗಿ ಮೀಸಲಿಟ್ಟಿದ್ದು, ಇದುವರೆಗೂ 3968 ಕೋಟಿಗಳ ಅನುದಾನ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

ಗೃಹ ಮಂಡಳಿ ವತಿಯಿಂದ ಹಾವೇರಿಯ ದೇವಗಿರಿ-ಯಲ್ಲಾಪುರ, ಬಳ್ಳಾರಿಯ ಕೊಳಗಲ್ಲು, ಹಲಗುಂದಿ-ಮುಂಡರಗಿ ಬಳಿ 222.37 ಕೋಟಿ ಮೊತ್ತದಲ್ಲಿ ಮೂರು ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಸರಕಾರದಿಂದ ಅನುಮೋದನೆ ಸಿಕ್ಕಿದ್ದು, ಅದನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ ನಿರ್ಮಾಣಗೊಂಡಿರುವ ಬಡಾವಣೆಗಳ ಸ್ಥಿತಿಗತಿ ತಿಳಿದುಕೊಳ್ಳುವ ಸಲುವಾಗಿ ಎಲ್ಲ ಬಡಾವಣೆಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ. ಅಭಿವೃದ್ಧಿಯಾಗದ ಬಡಾವಣೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ವಸತಿ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಬಿಡುಗಡೆಯಾಗಬೇಕಾದ ಹಣದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚೆ ನಡೆಸುತ್ತೇನೆ. ಈ ಸಂಬಂಧ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು. ಅಲ್ಲದೆ, ಹಣಕಾಸು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಮತ್ತಿತರೆ ಇಲಾಖೆಗಳೊಂದಿಗೆ ಸಭೆ ಮಾಡಿ ಕಾರ್ಯಕ್ರಮಗಳನ್ನು ಜಾರಿ ಮಾಡುವ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳ ಬೆಲೆ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ ಹಾಗೂ ಬಸವ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ನೀಡುವ ಘಟಕದ ವೆಚ್ಚ ಏರಿಕೆ ಮಾಡುವ ಸಂಬಂಧ ಪ್ರಸ್ತಾವನೆ ಬಂದರೆ ಅದನ್ನು ಏರಿಕೆ ಮಾಡುವ ಕುರಿತು ಚಿಂತನೆ ಮಾಡಲಾಗುತ್ತದೆ.

-ಎಂಟಿಬಿ ನಾಗರಾಜ್, ವಸತಿ ಸಚಿವ

ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಆದರೆ, ಸರಕಾರದಿಂದ ಇದುವರೆಗೂ ಪರಿಹಾರ ನೀಡಿಲ್ಲ. ಪರಿಹಾರ ನೀಡುವಂತೆ ಹಲವು ಬಾರಿ ಗೃಹ ಮಂಡಳಿ, ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಹಾರ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಭೂಮಿ ಕಳೆದುಕೊಂಡ ರೈತ ಶ್ರೀನಿವಾಸ್ ಸಚಿವ ನಾಗರಾಜ್ ಎದುರು ಅವಲತ್ತುಕೊಂಡರು. ಶ್ರೀನಿವಾಸ್‌ರನ್ನು ಸಮಾಧಾನಪಡಿಸಿದ ಸಚಿವ ಪರಿಹಾರ ಕೊಡಿಸುವ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News