ಇತಿಹಾಸ-ಪರಂಪರೆ ಅರಿವಿಗೆ ಪಾರಂಪರಿಕ ನಡಿಗೆ ಸಹಕಾರಿ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್

Update: 2019-01-02 16:56 GMT

ಧಾರವಾಡ, ಜ.2: ಶ್ರೀಮಂತವಾಗಿರುವ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ, ಸಂಘ, ಸಂಸ್ಥೆ, ಕಲೆ, ಸಂಗೀತ, ಸ್ಮಾರಕಗಳ ಬಗ್ಗೆ ಇರುವ ಇತಿಹಾಸ, ಪರಂಪರೆ ತಿಳಿಯಲು ಪಾರಂಪರಿಕ ನಡಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಬುಧವಾರ ಬೆಳಗ್ಗೆ ಕರ್ನಾಟಕ ಕಲಾ ಕಲಾಮಹಾವಿದ್ಯಾಲಯ ಮೈದಾನದಲ್ಲಿ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಆಯೋಜಿಸಿದ್ದ ‘ಪಾರಂಪರಿಕ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧಾರವಾಡ ನಗರ ಇತಿಹಾಸದ ಪುಟಗಳಲ್ಲಿ ಅನೇಕ ಮಹತ್ವದ ಘಟನೆಗಳಿಂದ ದಾಖಲಾಗಿದೆ. ಇಲ್ಲಿನ ಪ್ರತಿಯೊಂದು ಕಟ್ಟಡ, ಸಂಘ, ಸಂಸ್ಥೆಗಳ ಹುಟ್ಟು ರೋಚಕ ಇತಿಹಾಸವನ್ನು ಹೇಳುತ್ತದೆ. ವಿದ್ಯಾವರ್ಧಕ ಸಂಘ, ಕೆಸಿಡಿ ಕಾಲೆಜು ಡೈಯಟ್, ಚರ್ಚ್, ಬುದ್ಧ ರಕ್ಕಿತ ಶಾಲೆ, ಹೀಗೆ ಪ್ರತಿಯೊಂದು ಸ್ಥಳಗಳು ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿ ಕಾಣುತ್ತವೆ ಎಂದು ಅವರು ಹೇಳಿದರು.

ಪಾರಂಪರಿಕ ನಡಿಗೆಯಿಂದ ನಮ್ಮ ಇತಿಹಾಸ, ನಾಡಿನ ಸಾಧನೆಗಳನ್ನು ನೆನಪಿಸುವ ಜೊತೆಗೆ, ಅವುಗಳ ರಕ್ಷಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಜವಾಬ್ದಾರಿ, ಹೆಮ್ಮೆ ಹೆಚ್ಚುತ್ತದೆ ದೀಪಾ ಚೋಳನ್ ಹೇಳಿದರು. 

ಕೆಸಿಡಿ ಮೈದಾನದಲ್ಲಿ ಪಾರಂಪರಿಕ ನಡಿಗೆಗೆ ಧಾರವಾಡದ ಪ್ರಸಿದ್ಧ ಜಾನಪದ ಕಲೆ, ಜಗ್ಗಲಿ ಬಾರಿಸುವ ಮೂಲಕ ಅವರು ಚಾಲನೆ ನೀಡಿದರು. ಅಲ್ಲಿಂದ ಆಕಾಶವಾಣಿಗೆ ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ನಡಿಗೆಯಲ್ಲಿ ಆಗಮಿಸಿದ ಜಿಲ್ಲಾಧಿಕಾರಿ, ಆಕಾಶವಾಣಿ ನಿಲಯ ನಿರ್ದೇಶಕ ಸತೀಶ್ ಪರ್ವತಿಕರ್ ಅವರಿಂದ ಆಕಾಶವಾಣಿ ಬೆಳೆದು ಬಂದ ಬಗ್ಗೆ ಮಾಹಿತಿ ಪಡೆದರು. ನಂತರ ಡಾ. ಮಲ್ಲಿಕಾರ್ಜುನ ಮನ್ಸೂರ ಟ್ರಸ್ಟ್‌ಗೆ ತೆರಳಿ ಮನ್ಸೂರ ಅವರ ಸಮಾಧಿಗೆ ನಮನ ಸಲ್ಲಿಸಿ ಅವರ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

ನಂತರ 1888 ರಲ್ಲಿ ಸ್ಥಾಪಿತವಾದ ಆಲ್ ಸೆಂಟ್ಸ್ ಚರ್ಚ್‌ಗೆ ಭೇಟಿ ನೀಡಿದರು. ಅಲ್ಲಿಂದ ಕೆ.ಸಿ.ಪಾರ್ಕ್ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ್ದ ಬುದ್ಧರಕ್ಕಿತ ವಸತಿ ಶಾಲೆಗೆ ತೆರಳಿ ಮಾಹಿತಿ ಪಡೆದರು. ನಂತರ ಧಾರವಾಡ ಗ್ರಾಮದೇವತೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ದುರ್ಗಾದೇವಿ ಗುಡಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು.

ಮಹಾನಗರ ಪಾಲಿಕೆ, ವಸ್ತು ಸಂಗ್ರಹಾಲಯ, ಕರ್ನಾಟಕ ವಿದ್ಯಾವರ್ಧಕ ಸಂಘ, ಟೌನ್‌ಹಾಲ್‌ಗೆ ತೆರಳಿ ಇತಿಹಾಸದ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಡಾ.ಬಿ.ಸಿ.ಸತೀಶ್, ಉಪವಿಭಾಗಾಧಿಕಾರಿ ಮುಹಮ್ಮದ್ ಝುಬೇರ್, ಡಿಸಿಪಿ ಬಿ.ಎಸ್.ನೇಮಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News