ಮೂಡಿಗೆರೆ ತಹಶೀಲ್ದಾರ್ ಶಾರದಾಂಬ ಅಮಾನತಿಗೆ ಆಗ್ರಹಿಸಿ ಧರಣಿ

Update: 2019-01-02 17:19 GMT

ಚಿಕ್ಕಮಗಳೂರು, ಜ.2: ಮೂಡಿಗೆರೆ ತಾಲೂಕು ಕಚೇರಿ ಎದುರು ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘದ 3 ಮಂದಿ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕುಮ್ಮಕ್ಕು ನೀಡಿರುವ ಮೂಡಿಗೆರೆ ತಹಶೀಲ್ದಾರ್ ಶಾರದಾಂಬ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಧರಣಿ ನಡೆಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಇತ್ತೀಚೆಗೆ ಮೂಡಿಗೆರೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಆದರೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮೂಡಿಗೆರೆ ತಹಶೀಲ್ದಾರ್ ಮತ್ತು ಅವರ ಸಿಬ್ಬಂದಿ ರೈತ ಮುಖಂಡರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಆರೋಪಿಸಿದರು

ಮೂಡಿಗೆರೆ-ಚಿಕ್ಕಮಗಳೂರು ತಾಲೂಕು ಕಚೇರಿಯಲ್ಲಿ ಭೂ ದಾಖಲೆ ಸಂಬಂಧದ ಕೆಲ ಕಡತಗಳು ನಾಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಕೇಳಿದರೆ ಕಡತಗಳು ನಾಪತ್ತೆಯಾಗಿವೆ ಎಂದು ಹಿಂಬರಹ ನೀಡಲಾಗಿದೆ. ಕಡತ ಸಂರಕ್ಷಣಾ ಕಾಯ್ದೆಯಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸುವ ಬದಲು ಜಿಲ್ಲಾಡಳಿತ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿಗಳು, ಮೂಡಿಗೆರೆ ತಾಲೂಕು ಕಚೇರಿಯ ಶಿರಸ್ತೇದಾರರು ಕಡತ ಕಳವು ಮಾಡಿಕೊಂಡು ಹೋಗಿರುವುದಾಗಿ ಪೊಲೀಸರಿಗೆ ದೂರು ನೀಡಿ 3 ವರ್ಷಗಳು ಕಳೆದಿದ್ದರೂ ಪೋಲೀಸ್ ಇಲಾಖೆ ಏಕೆ ಕ್ರಮ ಜರಗಿಸಿಲ್ಲ ಎಂದು ಪ್ರಶ್ನಿಸಿದ ಮುಖಂಡರು, ಮೂಡಿಗೆರೆ ತಾಲೂಕು ಕೆಸವಳ್ಳಿಯ ಸ.ನಂ.2ರಲ್ಲಿ 22ಜನ ದಲಿತರಿಗೆ ಹಂಗಾಮಿ ಸಾಗುವಳಿ ಚೀಟಿ ನೀಡಿ 40 ವರ್ಷ ಕಳೆದಿದ್ದರೂ ಅವರಿಗೆ ಖಾಯಂ ಸಾಗುವಳಿ ಚೀಟಿ ನೀಡದಿರುವ ಕಾರಣವೇನು ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ತಾಲೂಕು ನಾಗರಹಳ್ಳಿ ಸ.ನಂ. 359 ಮತ್ತು 365ರಲ್ಲಿ ದಲಿತ ವ್ಯಕ್ತಿ ಕೆಂಚಯ್ಯರಿಗೆ 2 ಎಕರೆ ಜಮೀನು ಮಂಜೂರಾತಿಯಾಗಿ ಸ್ವಾಧೀನದಲ್ಲಿದ್ದರೂ ಯಾವುದೇ ವಿಚಾರಣೆ ನಡೆಸದೇ ಏಕಾಏಕಿ ಪಹಣಿ ರದ್ದುಗೊಳಿಸಿರುವುದು ಸರಿಯೇ?, ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳ ಸಂಬಂಧ ವಿಳಂಬ ನೀತಿ, ದಲ್ಲಾಳಿಗಳ ಹಾವಳಿ, ನಕಲಿ ಸಾಗುವಳಿ ಚೀಟಿ ನೀಡಿಕೆ, ಗುಣಮಟ್ಟವಿಲ್ಲದ ಕೃತಕ ಪಹಣಿ ಮತ್ತು ನಕಲಿ ದಾಖಲೆಗಳು ಸೃಷ್ಟಿಯಾಗುತ್ತಿರುವ ಬಗ್ಗೆ ಏಕೆ ಕ್ರಮ ವಹಿಸಿಲ್ಲ? ಎಂದು ಪ್ರಶ್ನಿಸಿದ ಮುಖಂಡರು, ಜಿಲ್ಲೆಯ ಅನೇಕ ಅಧಿಕಾರಿಗಳು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು, ಅವರ ವಿರುದ್ಧ 197 ಕಲಂನ್ವಯ ಕ್ರಮಕೈಗೊಳ್ಳಲು ಪೋಲೀಸರು ಅನುಮತಿ ಕೋರಿದ್ದರೂ ಜಿಲ್ಲಾಡಳಿತ ನಿರಾಕರಿಸಿದೆ ಎಂದು ಇದೇ ವೇಳೆ ದೂರಿದರು.

ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ ಮಂಜುನಾಥ್, ಮುಖಂಡರಾದ ಚಂದ್ರೇಗೌಡ, ಸಿಪಿಐ ಮುಖಂಡ ರೇಣುಕಾರಾಧ್ಯ, ಅಮ್ ಅದ್ಮಿ ಪಾರ್ಟಿ ಮುಖಂಡ ಸುಂದರೇಗೌಡ ಸೇರಿದಂತೆ ಹಲವು ರಾಜ್ಯ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News