ಚಿಕ್ಕಮಗಳೂರು: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ

Update: 2019-01-02 17:24 GMT

ಚಿಕ್ಕಮಗಳೂರು, ಜ.2: ಶಬರಿಮಲೆ ದೇವಾಲಯಕ್ಕೆ ಬುಧವಾರ ಬೆಳಗಿನ ಜಾವ ಪ್ರವೇಶಿಸಿ ದೇವರ ದರ್ಶನ ಪಡೆದ ಮಹಿಳೆಯರ ವರ್ತನೆಯನ್ನು ಖಂಡಿಸಿ ಶಬರಿಮಲೆ ಪರಂಪರೆ ಉಳಿಸಿ ಆಂದೋಲನ ಸಮಿತಿ ಸದಸ್ಯರು ನಗರದ ಹನುಮಂತಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷ ದೇವರಾಜ್‍ ಶೆಟ್ಟಿ, 800 ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದಿಂದ ದೇವಾಲಯದ ಪರಂಪರೆಗೆ ಧಕ್ಕೆಯುಂಟಾಗಿದೆ ಎಂದರು.

ದೇವಾಲಯವನ್ನು ಪ್ರವೇಶಿಸಿರುವ ಮಹಿಳೆಯರು ಚಾರಿತ್ರ್ಯಹೀನರು ಎಂದು ಆರೋಪಿಸಿದ ದೇವರಾಜ್‍ ಶೆಟ್ಟಿಮ, ಇವರ ವರ್ತನೆ ಕೋಟ್ಯಾಂತರ  ಅಯ್ಯಪ್ಪಭಕ್ತರ ಮನಸ್ಸನ್ನು ಘಾಸಿಗೊಳಿಸಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ನ್ಯಾಯಾಲಯದ ಆದೇಶಗಳನ್ನು ಮುಂದಿಟ್ಟುಕೊಂಡು ದೇವಾಲಯದ ಪರಂಪರೆಯನ್ನು ಹಾಳುಗೆಡವಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ನಗರಸಭಾ ಉಪಾಧ್ಯಕ್ಷ ಸುಧೀರ್ ಮಾತನಾಡಿ ಕೇರಳದ ಆಡಳಿತಾರೂಢ ಕಮ್ಯೂನಿಷ್ಟ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿಗೆ ಪ್ರಮಾಣಪತ್ರ ಸಲ್ಲಿಸುವ ನಾಟಕವಾಡಿ ಅದರೊಂದಿಗೆ ಇಬ್ಬರ ಮಹಿಳೆಯರನ್ನು ದೇವಾಲಯ ಪ್ರವೇಶಿಸಲು ಅನುವು ಮಾಡಿಕೊಡುವ ಮೂಲಕ ಆಲಯದ ಪಾವಿತ್ರ್ಯವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದರು.

ಕೇರಳ ರಾಜ್ಯದಲ್ಲಿ ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ನಿರಂತರ ಧಾಳಿ ಮಾಡುವುದರೊಂದಿಗೆ ಬಡ ಹಿಂದೂಗಳನ್ನು ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹಿಂದೂ ಸಮಾಜ ಜಾಗೃತರಾಗಿ, ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಿಡಿದೇಳುವ ಅಗತ್ಯವಿದೆ ಎಂದರು.

ಈ ಪ್ರತಿಭಟನೆಯಲ್ಲಿ ಅಯ್ಯಪ್ಪ ಭಕ್ತರಾದ ಬ್ಯಾಟರಿ ಮುರುಳಿ, ಕಾರ್ತಿಕ್ ಚಟ್ಟಿಯಾರ್, ಪ್ರದೀಪ್, ಸಂಘಪರಿವಾರದ ಮುಖಂಡರಾದ ಸಂತೋಷ್‍ ಕೋಟ್ಯಾನ್, ರಂಗನಾಥ್, ಪ್ರೇಂಕಿರಣ್, ವರಸಿದ್ದಿವೇಣುಗೋಪಾಲ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News