ಬಿಜೆಪಿಯರು ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದಾರೆ: ಸಚಿವ ಸಿ.ಎಸ್.ಪುಟ್ಟರಾಜು

Update: 2019-01-02 17:44 GMT

ಮೈಸೂರು,ಜ.2: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಆಪರೇಷನ್ ಕಮಲಕ್ಕೆ ಯತ್ನಿಸುತ್ತಿದ್ದಾರೆ. ಜೊತೆಗೆ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಪಾಂಡವಪುರ ತಾಲೂಕಿನ ಸಂಗಾಪುರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರು ಸಂದರ್ಭದಲ್ಲಿ ಬಿಸಿ ನೀರು ಬಿದ್ದು ಅಸ್ವಸ್ಥಗೊಂಡಿದ್ದ ಬಾಲಕಿಯ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿಯವರು ಆಪರೇಷನ್ ಕಮಲಕ್ಕೆ ಯತ್ನಿಸುತ್ತಿರುವುದು ನಿಜ. ಹಾಗಂತ ಯಾರೂ ಅತ್ತ ಒಲವು ತೋರಿಲ್ಲ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಜನಸಾಮಾನ್ಯರ ಸಮಸ್ಯೆ ಬಗೆಹರಿಸುವತ್ತ ಕೆಲಸ ಮಾಡುತ್ತಿದ್ದಾರೆ. ಅವರ ಸಂಪುಟದ ಸಹೋದ್ಯೋಗಿಗಳು ಸಹ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಕಡೆ ಮಾಧ್ಯಮ ಮಿತ್ರರೇ ಸರ್ಕಾರದ ಧಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾರಿಗೂ ಸಚಿವ ಸಂಪುಟದ ಬಗ್ಗೆ ಅಸಮಾಧಾನವಿಲ್ಲ. ನಮ್ಮಲ್ಲಿ ಯಾವುದೇ ರಾಜಕೀಯ ಗೊಂದಲವಿಲ್ಲ. ಆದರೆ ಕೆಲವು ಮಾಧ್ಯಮಗಳೇ ಗೊಂದಲವನ್ನ ಉಂಟು ಮಾಡುತ್ತಿವೆ. ದಯಮಾಡಿ ಮಾಧ್ಯಮದವರು ಇದನ್ನೆಲ್ಲ ಬಿಟ್ಟು ಸರ್ಕಾರದ ಬೆನ್ನು ತಟ್ಟುವ ಕೆಲಸ ಮಾಡಬೇಕು. ಹಾಗೆಯೇ ರಮೇಶ್ ಜಾರಕಿಹೊಳಿಯವರು ಎಲ್ಲೂ ಹೋಗಿಲ್ಲ. ಅವರು ಸಹ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ. ರಾಜಕೀಯವಾಗಿ ಬೇಜಾರಾದ ಸಂದರ್ಭದಲ್ಲಿ ಈ ರೀತಿ ಸನ್ನಿವೇಶಗಳು ಉದ್ಭವವಾಗುತ್ತವೆ. ಈ ಸಮಸ್ಯೆಗಳನ್ನೆಲ್ಲ ರಾಜ್ಯದ ಮುಖ್ಯಮಂತ್ರಿ ಬಗೆಹರಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News