ಹನೂರು ವಿಷಪ್ರಸಾದ ದುರಂತ: ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ನಾಲ್ವರು ಅಸ್ವಸ್ಥರು ಬಿಡುಗಡೆ
ಮೈಸೂರು,ಜ.2: ನಗರದ ಹೃದಯಭಾಗದಲ್ಲಿರುವ ಡಿಆರ್‍ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ವಿಷಪೂರಿತ ಪ್ರಸಾದ ಸೇವಿಸಿದ ನಾಲ್ವರು ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರಲ್ಲದೇ ಜನವರಿ 1ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಹಲವಾರು ರೋಗಿಗಳು ನಗರದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ರೋಗಿಗಳ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸಿತ್ತು.
ಡಿಸೆಂಬರ್ 15 ರಂದು ಜಯಲಕ್ಷ್ಮಿ(19), ಕೆಂಪರಾಜಮ್ಮ (38), ಮಹಾದೇವಿ (33) ಹಾಗೂ ರಮೇಶ್ (25) ಎಂಬ ಒಂದೇ ಕುಟುಂಬದ ನಾಲ್ವರು ಸದಸ್ಯರು ವಿಷಾಹಾರ ಸೇವನೆಯಿಂದಾಗಿ ಅಸ್ವಸ್ಥಗೊಂಡು ನಗರದ ಪ್ರತಿಷ್ಠಿತ ಡಿಆರ್‍ಎಂ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಧಿಕ ಪ್ರಮಾಣದ ವಿಷದ ಸೇವನೆ ಹಾಗೂ ಆಸ್ಪತ್ರೆಗೆ ಕರೆತರುವಾಗ ಆದ ವಿಳಂಬದ ಪರಿಣಾಮವಾಗಿ ಅವರು ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ವಿಷದ ಪರಿಣಾಮವಾಗಿ ಅವರು ಶ್ವಾಸಕೋಶಗಳ ವೈಫಲ್ಯಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸುವ ಮೂಲಕ ಅವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು.
ಸತತವಾಗಿ 12 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ಬಳಿಕ ರೋಗಿಗಳನ್ನು ವೆಂಟಿಲೇಟರ್ ನಿಂದ ಹೊರತೆಗೆಯಲಾಯಿತು. ನಂತರ ನಾಲ್ವರು ರೋಗಿಗಳೂ ಸಂಪೂರ್ಣವಾಗಿ ಗುಣಮುಖರಾಗಿದ್ದು, ಹೊಸ ವರ್ಷದ ಮೊದಲ ದಿನದಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಬಿಹೆಚ್ ತಿಳಿಸಿದ್ದಾರೆ.
ಅಸ್ವಸ್ಥರು ಚೇತರಿಸಿಕೊಂಡು ಊರಿಗೆ ಮರಳುವಂತೆ ಮಾಡಲು ಸಹಕರಿಸಿದ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ. ಗುಣಮುಖರಾದವರು ಊರಿಗೆ ಮರಳುವ ಸಂದರ್ಭ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಚಾಮರಾಜನಗರ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ರಘುರಾಮ್, ಡಾ.ನಿಸರ್ಗ, ಡಾ. ಅಂಜಲಿ ಉಪಸ್ಥಿತರಿದ್ದರು.