×
Ad

ತುಮಕೂರು ಕ್ಷೇತ್ರ ಜೆಡಿಎಸ್‍ಗೆ ಬಿಟ್ಟುಕೊಡಲು ಬೇಡಿಕೆ: ಜೆಡಿಎಸ್ ತುಮಕೂರು ಜಿಲ್ಲಾ ಉಸ್ತುವಾರಿ ಎಚ್.ನಿಂಗಪ್ಪ

Update: 2019-01-02 23:54 IST

ತುಮಕೂರು,ಜ.3: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಯುಕ್ತವಾಗಿ ಸ್ಪರ್ಧೆ ನಡೆಸಲಿದ್ದು, ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಪಕ್ಷದ ವರಿಷ್ಠರು, ಕಾಂಗ್ರೆಸ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಉಸ್ತುವಾರಿ ಎಚ್.ನಿಂಗಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತಲೂ ಹೆಚ್ಚಿನ ಮತಗಳನ್ನು ಜೆಡಿಎಸ್ ಪಡೆದುಕೊಂಡಿದೆ. 3 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಕೇಳಲಾಗುತ್ತಿದೆ ಎಂದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‍ನಲ್ಲಿ 4-5 ಆಕಾಂಕ್ಷಿಗಳಿದ್ದಾರೆ, ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟದ್ದು. ಯಾರಿಗೆ ಟಿಕೆಟ್ ಕೊಟ್ಟರೂ ಈ ಭಾರೀ ಜೆಡಿಎಸ್ ಗೆಲ್ಲಿಸಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ಗುರುವಾರ ರಾಜ್ಯದ ಮಟ್ಟದ ಸಭೆಯನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕರೆದಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸೇರಿದಂತೆ ಸಚಿವರು, ಶಾಸಕರು, ಮಾಜಿ ಶಾಸಕರು, ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವ ಮೂಲಕ ಪಕ್ಷವನ್ನು ಸಂಘಟನೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ಶಕ್ತಿ ಕಳೆದುಕೊಂಡ ಮೋದಿ: 2014ರಲ್ಲಿ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಎನ್‍ಡಿಎ ಸರ್ಕಾರ ಮೊದಲಿನಂತೆ ಶಕ್ತಿಯುತವಾಗಿ ಉಳಿದುಕೊಂಡಿಲ್ಲ, ಸಾಲಮನ್ನಾ ಸೇರಿದಂತೆ ಯಾವುದೇ ರೈತ ಪರವಾದ ಯೋಜನೆಗಳನ್ನು ತಂದಿಲ್ಲ. ಮೋದಿ ಭಾಷಣಗಳು ಶಕ್ತಿಯನ್ನು ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಚುನಾವಣೆಯನ್ನು ಎದುರಿಸಲಿದೆ. ಪರಸ್ಪರ ಮಾತುಕತೆಯ ಮೂಲಕ ಸ್ಥಾನ ಹಂಚಿಕೆ ಮಾಡಿಕೊಳ್ಳುವುದಾಗಿ ಹೇಳಿದರು.

ಜೆಡಿಎಸ್ ವರಿಷ್ಠರು ಪಕ್ಷಕ್ಕೆ 12 ಸ್ಥಾನಗಳನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದು, ರಾಜ್ಯದಲ್ಲಿ ಎರಡು ಪಕ್ಷಗಳು ಒಂದಾಗಿ ಚುನಾವಣೆಯನ್ನು ಎದುರಿಸಿದರೆ, ಎಲ್ಲೆಡೆ ಮೈತ್ರಿ ಪಕ್ಷಗಳು ಸಾಧಿಸಲಿವೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಎಸ್ಸಿ-ಎಸ್ಟಿ ವಿಭಾಗದ ಅಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮಮ್ಮ ವೀರೇಗೌಡ, ಲೀಲಾವತಿ, ನಗರಾಧ್ಯಕ್ಷ ಬೆಳ್ಳಿಲೋಕೇಶ್, ಎಸ್ಸಿ ವಿಭಾಗದ ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News