×
Ad

ಮೋದಿ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪೆನಿಯನ್ನು ರಕ್ಷಿಸುತ್ತಿದ್ದಾರೆ: ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ

Update: 2019-01-02 23:58 IST

ತುಮಕೂರು,ಜ.2: ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸ್ವಯಂ ಆ ಕಂಪನಿಯ ರಕ್ಷಣೆಯಲ್ಲಿ ತೊಡಗಿದ್ದು, ಈ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವುದಾಗಿ ಘೋಷಿಸಿಕೊಂಡಿರುವ ಮೋದಿ ಸರ್ಕಾರ ಗಂಭೀರ ಅವ್ಯವಹಾರದ ಆರೋಪಗಳನ್ನು ಎದುರಿಸುತ್ತಿರುವ ಅಗಸ್ಟಾ ವೆಸ್ಟ್‍ಲ್ಯಾಂಡ್ ಕಂಪೆನಿಯ ರಕ್ಷಣೆಗೆ ಮುಂದಾಗಿದ್ದಾರೆ. ಈ ಕಂಪನಿ ಹಾಗೂ ಫಿನ್ಮೆಕಾಮಿಕ ಕಂಪನಿಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ್ದು ಎನ್‍ಡಿಎ ಸರ್ಕಾರ ಅದನ್ನು ಕಪ್ಪು ಪಟ್ಟಿಯಿಂದ ತೆಗೆದು ಅವರಿಗೆ 100 ನೌಕ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಈಗಾಗಲೇ ಅಗಸ್ಟಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಎಫ್‍ಐಆರ್ ದಾಖಲಿಸಿ, ಸಿಬಿಐ ತನಿಖೆಗೆ ಆದೇಶಿಸಿದೆ. ಈಗ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರವೇ ಇದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣದ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಸಿಬಿಐನವರಿಂದಲೇ ತರಿಸಿಕೊಳ್ಳಲಿ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದಾಗಿ ಹೇಳುತ್ತಿದ್ದ ಪ್ರಧಾನಿಯವರು ಅದಕ್ಕೆ ಪೂರಕ ಸಾಕ್ಷಾಧಾರಗಳಿಲ್ಲದ ಕಾರಣ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರು ಮತ್ತು ಎಸ್ಸಿ.,ಎಸ್ಟಿ. ಜನಾಂಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಬೇರೊಬ್ಬರನ್ನು ಹಗರಣದಲ್ಲಿ ಸಿಲುಕಿಸಲು ಮೋದಿ ಅವರು ಹೆಣೆದ ಸುಳ್ಳಿನ ಬಲೆಯಲ್ಲಿ ಅವರೇ ಸಿಕ್ಕಿ ಬೀಳುವ ಪರಿಸ್ಥಿತಿ ಬಂದಿದ್ದು, ಇವರ ವರ್ತನೆಯಿಂದ ಬೇಸತ್ತಿರುವ ಬಿಜೆಪಿಯ ಮುರುಳಿ ಮನೋಹರ ಜೋಷಿ, ಯಶವಂತಸಿನ್ಹ, ಶತ್ರುಘ್ನಸಿನ್ಹ, ಸುಬ್ರಮಣ್ಯ ಸ್ವಾಮಿ, ಸಾವಿತ್ರಿ ಬಾಪುಲೆ ಮುಂತಾದವರು ಇವರ ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮೋದಿ, ಅಮೀತ್‍ ಶಾ, ಆದಿತ್ಯನಾಥ್ ಹಾಗೂ ನಿತಿನ್‍ ಗಡ್ಕರಿ ಅವರ ಮಾತು ಮಾತ್ರ ನಡೆಯುತ್ತಿದ್ದು, ಈ ಗುಜರಾತಿ ಸಹೋದರರ ವರ್ತನೆ ಅವರ ಪಕ್ಷದ ಮುಖಂಡರಲ್ಲೇ ಬೇಸರ ತರಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮುಖಂಡರಾದ ಟಿ.ಬಿ.ಮಲ್ಲೇಶ್, ಇಂದಿರಾದೇನಾನಾಯ್ಕ್, ಮರಿಚನ್ನಮ್ಮ, ಆಟೋರಾಜು, ಎನ್.ಮಂಜುನಾಥ್, ಬಿ.ಜಿ.ನಿಂಗರಾಜು, ಜಿ.ಎಲ್.ಗೌಡ, ಪುಟ್ಟರಾಜು, ಮುಷ್ತಾಕ್ ಅಹಮದ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News