×
Ad

ರಾಜಕೀಯವಾಗಿ ರಮೇಶ್ ಜಾರಕಿಹೊಳಿಯನ್ನು ಮುಗಿಸುವ ಷಡ್ಯಂತ್ರ: ದಿನೇಶ್‌ ಗುಂಡೂರಾವ್

Update: 2019-01-03 19:09 IST

ಬೆಂಗಳೂರು, ಜ.3: ರಾಜಕೀಯವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಮುಗಿಸುವ ಷಡ್ಯಂತ್ರವನ್ನು ಕೆಲವರು ಮಾಡುತ್ತಿದ್ದು, ಅನಾವಶ್ಯಕವಾಗಿ ರಮೇಶ್ ಹೆಸರಿನಲ್ಲಿ ಹಿತಶತ್ರುಗಳು ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಜೊತೆ ಅವರ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಹಲವು ವಿಚಾರ ಚರ್ಚೆ ಮಾಡಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಬೇರೆಯವರ ಜೊತೆ ಮಾತನಾಡುವುದು ಬಿಟ್ಟು, ನೇರವಾಗಿ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು, ಎಲ್ಲೆಲ್ಲೋ ಹೇಳಿಕೆಗಳನ್ನು ಕೊಟ್ಟು ಗೊಂದಲ ಉಂಟು ಮಾಡಿ, ಅವರ ಹೆಸರನ್ನು ಅವರೇ ಹಾಳು ಮಾಡಿಕೊಳ್ಳುವುದು ಬೇಡ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂದು ಅವರು ಹೇಳಿದರು.

ಸಚಿವ ಆರ್.ಬಿ.ತಿಮ್ಮಾಪುರ್‌ಗೆ ಇನ್ನೂ ಖಾತೆ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್, ಈ ವಿಚಾರದ ಕುರಿತು ಬಹಿರಂಗ ಚರ್ಚೆ ಅಗತ್ಯವಿಲ್ಲ. ನಾವು ಸಮ್ಮಿಶ್ರ ಸರಕಾರದಲ್ಲಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳನ್ನು ಕೂತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಮೈತ್ರಿ ಧರ್ಮ ಪಾಲನೆ ಮಾಡುವುದು ಕಾಂಗ್ರೆಸ್ ತೀರ್ಮಾನ. ಏಕಪಕ್ಷೀಯವಾಗಿ ನಡೆದುಕೊಳ್ಳಬೇಕೆಂಬ ಆಲೋಚನೆ ನಮ್ಮಲ್ಲಿಲ್ಲ. ನಾವು ಅಂತಹ ಯಾವುದೇ ಏಕಪಕ್ಷೀಯ ತೀರ್ಮಾನಗಳನ್ನು ಮಾಡಿಲ್ಲ. ಸಮ್ಮಿಶ್ರ ಸರಕಾರ ಐದು ವರ್ಷ ಅಧಿಕಾರ ಪೂರೈಸಬೇಕು ಅನ್ನೋದು ನಮ್ಮ ಗುರಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News