×
Ad

ಮೂಡಿಗೆರೆ ತಹಶೀಲ್ದಾರ್ ಅಮಾನತಿಗೆ ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ರೈತಸಂಘದ ಧರಣಿ

Update: 2019-01-03 20:29 IST

ಚಿಕ್ಕಮಗಳೂರು, ಜ.3: ತಾಲೂಕು ಕಚೇರಿ ಎದುರು ಶಾಂತಿಯುತವಾಗಿ ಧರಣಿ ಮಾಡಿದ ರೈತಸಂಘದ ಮೂವರು ಸದಸ್ಯರ ಮೇಲೆ ಮೂಡಿಗೆರೆ ತಹಶೀಲ್ದಾರ್ ಸುಳ್ಳು ದೂರು ನೀಡಿದ ಮೊಕದ್ದಮೆ ದಾಖಲಿಸಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಬುಧವಾರ ರೈತಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಆರಂಭಿಸಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತದಿಂದ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಗುರುವಾರವೂ ಧರಣಿ ಮುಂದುವರಿಯಿತು.

ನಗರದ ಆಝಾದ್ ಪಾರ್ಕ್ ಆವರಣದಲ್ಲಿ ಅಹೋರಾತ್ರಿ ನಡೆಸುತ್ತಿರುವ ರೈತಸಂಘದ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಮೂಡಿಗೆರೆ ತಹಶೀಲ್ದಾರ್ ವಿರುದ್ಧ ಗುರುವಾರ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ರೈತ ಮುಖಂಡರು, ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಇತ್ತೀಚೆಗೆ ಮೂಡಿಗೆರೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭ ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಮೂಡಿಗೆರೆ ತಹಶೀಲ್ದಾರ್ ಮತ್ತು ಸಿಬ್ಬಂದಿ ರೈತ ಮುಖಂಡರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಜಿಲ್ಲಾಡಳಿತ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಮೂಡಿಗೆರೆ ತಹಶೀಲ್ದಾರ್ ಮಹಿಳಾ ಸಿಬ್ಬಂದಿಯೋರ್ವರನ್ನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸುವ ಮೂಲಕ ರೈತರ ಹೋರಾಟವನ್ನು ಮಟ್ಟ ಹಾಕುವ ಪ್ರಯತ್ನ ನಡೆಸಿದೆ. ಇವರ ಗೊಡ್ಡು ಬೆದರಿಕೆಗೆ ಸಂಘಟನೆ ಹೆದರುವುದಿಲ್ಲ. ರಾಜ್ಯ ಸರಕಾರ ನೌಕರರ ದೂರು ಮುಂದಿಟ್ಟುಕೊಂಡು ಧ್ವೇಷ ಸಾಧಿಸುವುದನ್ನು ಮುಂದುವರಿಸಿದಲ್ಲಿ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ. ರೈತರ ಮೇಲೆ ಸರಕಾರಕ್ಕೆ ಗೌರವವಿದ್ದರೇ ತಹಶೀಲ್ದಾರ್ ನೀಡಿರುವ ದೂರನ್ನು ಕೈಬಿಡಲು ಸರಕಾರ ಸೂಚಿಸಬೇಕು. ಜಿಲ್ಲಾಡಳಿತ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣದ ವಿರುದ್ಧ ಸೂಕ್ತ ಕ್ರಮಕೈಗೊಂಡು ತನಿಖೆ ಆರಂಭಿಸಬೇಕು. ರೈತ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಮೂಡಿಗೆರೆ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು. ಈ ಸಂಬಂಧ ಜಿಲ್ಲಾಡಳಿತ ಅಗತ್ಯ ಕ್ರಮವಹಿಸುವ ವರೆಗೂ ರೈತರು ಅಹೋರಾತ್ರಿ ಧರಣಿ ನಡೆಸಲಿದ್ದಾರೆಂದು ಮುಖಂಡರು ಎಚ್ಚರಿಸಿದರು.

ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಸಿ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ.ಮಂಜುನಾಥ್, ಮುಖಂಡರಾದ ಮಹಿಳಾ ಅಧ್ಯಕ್ಷೆ ವನಶ್ರೀ, ಸಂಘಟನೆಯ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ, ಮುಖಂಡರಾದ ಲಕ್ಷ್ಮಣಗೌಡ, ಚಂದ್ರೇಗೌಡ, ನಳೀನಾ ಪ್ರಜ್ವಲಾ ಸೇರಿದಂತೆ ನೂರಾರು ಮಹಿಳೆಯರು ಧರಣಿಯಲ್ಲಿ ಭಾಗವಹಿಸಿದ್ದರು. ಸಿಪಿಐ, ಅಮ್ ಅದ್ಮಿ ಪಕ್ಷ ಸೇರಿದಂತೆ ಜಿಲ್ಲೆಯ ವಿವಿಧ ಪ್ರಗತಿಪರ, ದಲಿತ ಸಂಘಟನೆಗಳ ಮುಖಂಡರು ಗುರುವಾರ ರೈತಸಂಘದ ಧರಣಿಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News