ಲಿಂಗಾಯತ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವವರೆಗೂ ನಿರಂತರ ಹೋರಾಟ: ಮುರುಘಾ ಶ್ರೀ
ದಾವಣಗೆರೆ,ಜ.3: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಸಿಗುವವರೆಗೂ ನಿರಂತರವಾಗಿ ಹೋರಾಟ ನಡೆಯಲಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಮಾತ್ರಕ್ಕೆ ಧರ್ಮದ ಹೋರಾಟವಂತೂ ನಿಲ್ಲುವುದಿಲ್ಲ. ಹಿಂದಿನಿಂದಲೂ ಸ್ವತಂತ್ರ ಧರ್ಮದ ಹೋರಾಟ ನಡೆಯುತ್ತಿದ್ದು, ಕಳೆದ ವರ್ಷವಷ್ಟೇ ಈ ಹೋರಾಟ ಒಂದಿಷ್ಟು ತೀವ್ರತೆಯನ್ನು ಪಡೆದಿತ್ತು. ಹೋರಾಟಕ್ಕೆ ಹಿನ್ನಡೆ, ಮುನ್ನಡೆಯೆಂಬ ಪ್ರಶ್ನೆಯೇ ಇಲ್ಲ. ನ್ಯಾಯ ಸಿಗೋವರೆಗೂ ಹೋರಾಟ ನಿಶ್ಚಿತ ಎಂದರು.
ವಚನ, ಸಂವಿಧಾನ ಓದಿದವರಿಗೆ ವಚನ, ಧರ್ಮ ಅರ್ಥವಾಗುತ್ತದೆ. ಯಾವ ಧರ್ಮ ಸತ್ಯದ ಮೇಲೆ, ಮಾನವೀಯ ಮೌಲ್ಯಗಳ ಮೇಲೆ ನಿಲ್ಲುತ್ತದೋ ಅದೇ ಅಂತಿಮ ಸತ್ಯ. ಜಾತಿ ಎಂಬುದು ಜಡ, ನೀತಿ ಎಂಬುದೇ ವಿಶಾಲ. ಜಾತಿಗೆ ಜೋತು ಬೀಳದೇ, ಬಸವತ್ವ, ನೀತಿ, ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಲಿಂಗಾಯತ ಧರ್ಮದ ಸಾರ. ಇಂದು ಬಸವಣ್ಣನನ್ನು ವಿರೋಧಿಸಿದ್ದ ಮಠಾಧೀಶರೂ ಬಸವಣ್ಣ ನಮ್ಮವನೆಂದು ಒಪ್ಪಿಕೊಳ್ಳುತ್ತಿದ್ದಾರೆಂದರೆ, ಇದು ವೈಚಾರಿಕ ಧರ್ಮದ ಹೋರಾಟದ ಫಲವೆಂದೇ ಅಭಿಪ್ರಾಯಪಡುತ್ತೇವೆ ಎಂದರು.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಿಸಿದ್ದು ಸರಿ, ತಪ್ಪಿನ ಪ್ರಶ್ನೆಯಲ್ಲ. ತಮಗೂ ಹಕ್ಕು, ಸ್ವಾತಂತ್ರ್ಯ ಬೇಕಾಗಿದೆಯೆಂದು ಮಹಿಳೆಯರು ನಡೆಸಿರುವ ವೈಚಾರಿಕ ಹೋರಾಟಕ್ಕೆ ತಮ್ಮ ಬೆಂಬಲವಿದೆ. ಹಿಂದಿನಿಂದಲೂ ಇಂತಹ ಸಾಕಷ್ಟು ಹೋರಾಟ ನಡೆದಿದ್ದು, ಈ ಪೈಕಿ ಶಬರಿಮಲೆ ದೇಗುಲ ಪ್ರವೇಶವೂ ಒಂದಷ್ಟೇ. ಯಾವುದೇ ಜಾತಿ, ಧರ್ಮದಲ್ಲಿ ವೈಚಾರಿಕ ಸಂಘರ್ಷ ನಡೆದರೂ ಅದಕ್ಕೆ ತಮ್ಮ ಬೆಂಬಲವಿದೆ ಎಂದರು.