ದಾವಣಗೆರೆ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ
ದಾವಣಗೆರೆ,ಜ.3: ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಕೇರಳ ಸರ್ಕಾರದ ವಿರುದ್ಧ ನಗರದಲ್ಲಿ ಗುರುವಾರ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸಂಘಪರಿವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಯ್ಯಪ್ಪನ ದರ್ಶನ ಪಡೆದಿರುವ ಬಿಂದು ಹಾಗೂ ಕನಕದುರ್ಗಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಬಿ.ಶಂಕರನಾರಾಯಣ, ನಿರ್ಬಂಧ ಧಿಕ್ಕರಿಸಿ ಶಬರಿಮಲೈ ಪ್ರವೇಶಿಸುವ ಮೂಲಕ 800 ವರ್ಷಗಳ ಪದ್ಧತಿಯನ್ನು ಮುರಿಯಲಾಗಿದೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರಣ. ಶತ ಶತಮಾನಗಳ ಸಂಪ್ರದಾಯ ಮುರಿದಿರುವುದು ಮತ ಬ್ಯಾಂಕುಗಳಿಗಾಗಿ ಎನ್ನುವುದು ಮೇಲುನೋಟಕ್ಕೆ ಗೋಚರಿಸುತ್ತದೆ ಎಂದರು.
ಈ ಸಂಪ್ರದಾಯ ಮುರಿಯುವುದು ಸರಿಯಲ್ಲ ಮತ್ತು ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಆದೇಶ ಕೂಡ ಸಂಬಂಧಪಡುವುದಿಲ್ಲ ಎಂದು ಅನೇಕ ಹಿರಿಯ ಧಾರ್ಮಿಕ ಮುಖಂಡರು ಹೇಳಿದ್ದಾರೆ. ಆದರೂ ಇದನ್ನು ಧಿಕ್ಕರಿಸಿ ಹೋಗಿದ್ದಾರೆ. ಮುಖ್ಯವಾಗಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ಹಂತದಲ್ಲಿರುವಾಗ ಹೀಗೆ ಹೆಣ್ಣುಮಕ್ಕಳನ್ನು ಕರೆಸಿ ದೇವಸ್ಥಾನಕ್ಕೆ ಮಾರುವೇಶದಲ್ಲಿ ಕಳುಹಿಸುವ ಉದ್ದೇಶ ವಾದರೂ ಏನಿತ್ತು ಎಂದು ಪ್ರಶ್ನಿಸಿದರು. ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ವಿಪ ಮಾಜಿ ಸಚೇತಕ ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಎಚ್.ಎನ್.ಶಿವಕುಮಾರ್, ವೈ.ಮಲ್ಲೇಶ್, ಸತೀಶ್ ಪೂಜಾರಿ, ಚಂದ್ರಿಕಾ ಜಗನ್ನಾಥ್ ಮತ್ತು ಅನೇಕ ಮಾಲಾಧಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.