ಪುಸ್ತಕ ವಿವಾದ: ಪ್ರೊ.ಭಗವಾನ್ ವಿರುದ್ಧ ಕ್ರಮ ಕೈಗೊಳ್ಳದಿರಲು ದಲಿತ ಸಂಘರ್ಷ ಸಮಿತಿ ಆಗ್ರಹ
ಮೈಸೂರು,ಜ.3: ಪ್ರಗತಿಪರ ಚಿಂತಕ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದ್ದು, ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ರಾಮಾಯಣ, ಮಹಾಭಾರತ ಗ್ರಂಥಗಳು ರಚನೆಗೊಂಡ ನಂತರ ಎಲ್ಲಾ ಕಾಲಮಾನದಲ್ಲೂ ಮುಕ್ತ ಚರ್ಚೆಗೊಳಗಾಗಿ ಅಂದಿನ ಸಾಹಿತ್ಯಕಾರರ ಅಭಿರುಚಿ ಮತ್ತು ಭಾವನೆಗಳಿಗೆ ತಕ್ಕಂತೆ ಬದಲಾವಣೆಗೊಳ್ಳುತ್ತಾ ಬಂದಿದ್ದು, ಜನಪದ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ವಿಮರ್ಶೆಗೊಳಪಟ್ಟಿವೆ. ಹಾಗೆಯೇ ಪ್ರೊ.ಕೆ.ಎಸ್.ಭಗವಾನ್ ಅವರು ವಾಲ್ಮೀಕಿ ರಚಿತ ಮೂಲ ಸಾಹಿತ್ಯದ ಅಂಶಗಳನ್ನು ಉಲ್ಲೇಖಿಸಿ 'ರಾಮ ಮಂದಿರ ಏಕೆ ಬೇಡ; ಎಂಬ ಪುಸ್ತಕವನ್ನು ರಚಿಸಿದ್ದಾರೆ. ಇದು ಅವರಿಗೆ ಸಂವಿಧಾನ ಬದ್ದವಾಗಿ ಬಂದ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ ಎಂದು ಹೇಳಿದ್ದಾರೆ.
ಇದು ಹಿಂದೂ ಧಾರ್ಮಿಕತೆ ಹಾಗೂ ಧರ್ಮಾಚರಣೆಗೆ ಸಂಬಂಧಿಸಿದ ವಿಷಯವಾಗಿಲ್ಲದಿದ್ದರೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಮೂಡನಂಬಿಕೆ ಆಧಾರದ ಮೇಲೆ ನೀಡಿದ ದೂರನ್ನು ಆಧರಿಸಿ ಭಗವಾನ್ ಅವರನ್ನು ಪೊಲೀಸರ ಮೂಲಕ ಬಾಯಿ ಮುಚ್ಚಿಸಲು ಮುಂದಾಗಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರೊ.ಕೆ.ಎಸ್.ಭಗವಾನ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ತಿಂಗಳ ಜ.8 ಮತ್ತು 9 ರಂದು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಎಡ ಪಕ್ಷಗಳು ಕರೆ ನೀಡಿರುವ ಮುಷ್ಕರಕ್ಕೆ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಅಂದಿನ ಪ್ರತಿಭಟನೆಯಲ್ಲಿ ಎಲ್ಲಾ ದಸಂಸ ಕಾರ್ಯಕರ್ತರು ಭಾಗವಹಿಸಬೇಕೆಂದು ಶಂಭುಲಿಂಗಸ್ವಾಮಿ ಮತ್ತು ಜಗದೀಶ್ ಕೆ. ಮನವಿ ಮಾಡಿದ್ದಾರೆ.