ಶಬರಿಮಲೆ: ಮಹಿಳೆಯರ ಪ್ರವೇಶ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ

Update: 2019-01-03 18:09 GMT

ಮಂಡ್ಯ,ಜ.3: ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ದುರುದ್ದೇಶದಿಂದ ಒಳಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಬಿಂದು ಹಾಗೂ ಕನಕದುರ್ಗಾ ಎಂಬ ಮಹಿಳೆಯರು ರಾತ್ರಿ ಸಮಯದಲ್ಲಿ ಏಕಾಏಕಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದರಿಂದ ಅವರನ್ನು ಕೂಡಲೇ ಬಂಧಿಸಬೇಕು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಹಿಳೆಯರು ಪ್ರವೇಶಿಸಲು ಎಲ್ಲ ರೀತಿಯ ಯೋಜನೆಗಳನ್ನು ಹಾಕಿಕೊಂಡು ದೇವಾಲಯ ಪ್ರವೇಶಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕರ್ತರಾದ ಸಿದ್ದರಾಜುಗೌಡ, ಎಸ್.ಶಿವಕುಮಾರ್ ಆರಾಧ್ಯ, ಎಂ.ಸಿ.ವರದರಾಜು, ಮಾದರಾಜು ಅರಸ್, ಎಂ.ಬಿ.ರಮೇಶ್, ತಮ್ಮಣ್ಣ, ಹನುಮಂತ, ಸಿ.ಟಿ.ಮಂಜುನಾಥ, ಬೋರೇಗೌಡ, ಪುಟ್ಟಮಾದಶೆಟ್ಟಿ, ಹನಿಯಂಬಾಡಿ ನಾಗರಾಜು, ವಿಷಕಂಠಯ್ಯ, ಕೆ.ಸಿ.ಪ್ರಸನ್ನಕುಮಾರ್, ರೇವನಂಜುಂಡಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News