ಸಾಹಿತ್ಯ ಸಮ್ಮೇಳನಗಳಲ್ಲಿ ವೈದಿಕ ಸಂಕೇತಗಳೇಕೆ?

Update: 2019-01-04 06:33 GMT

ಧಾರವಾಡದಲ್ಲಿ ಕನ್ನಡ ಸಾಹಿತ್ಯ ಜಾತ್ರೆ ಆರಂಭವಾಗಿದೆ. ಧಾರವಾಡ ಸಾಹಿತ್ಯ ದಿಗ್ಗಜರ ತವರು. ಧಾರವಾಡದಲ್ಲಿ ಒಂದು ಕಲ್ಲು ಎಸೆದರೆ ಅದು ಹೋಗಿ ಯಾವುದಾದರೂ ಸಾಹಿತಿಯ ಮನೆಗೇ ಬೀಳುತ್ತದೆ ಎಂಬ ಮಾತಿದೆ. ಅಂದರೆ ಧಾರವಾಡದ ಪ್ರತಿಮನೆಯಲ್ಲೂ ಒಬ್ಬರಲ್ಲ, ಒಬ್ಬ ಸಾಹಿತಿಯಿರುತ್ತಾನೆ ಎನ್ನುವುದನ್ನು ಇದು ಹೇಳುತ್ತದೆ. ಈ ಹಿನ್ನೆಲೆಯಲ್ಲೇ ಧಾರವಾಡದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಈ ಬಾರಿ ಸಾಹಿತ್ಯ ಸಮ್ಮೇಳನ ಬೇರೆಯದೇ ಕಾರಣಕ್ಕಾಗಿ ಚರ್ಚೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ‘ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ’ ಹಮ್ಮಿಕೊಂಡಿರುವುದನ್ನು ಈ ನಾಡಿನ ಮಹಿಳೆಯರು ಮತ್ತು ಸಾಹಿತ್ಯಾಸಕ್ತರು ಪ್ರಶ್ನಿಸಿದ್ದಾರೆ.

ಸಾಹಿತ್ಯವೆನ್ನುವುದು ಸರ್ವರಿಗೂ ಹಿತವನ್ನು ಬಯಸುವಂತಹದು. ಸುಮಂಗಲಿ ಎನ್ನುವ ಪದವೇ ಮಹಿಳೆಯರನ್ನು ಅವಮಾನಿಸುವ ಧ್ವನಿಯನ್ನು ಹೊಂದಿದೆ. ಪತಿಯನ್ನು ಹೊಂದಿದ ಮಹಿಳೆಗಷ್ಟೇ ಈ ನೆಲದಲ್ಲಿ ಸುಮಂಗಲಿ ಎನ್ನುವ ಪದವನ್ನು ಬಳಸುತ್ತಾರೆ. ಇದು ಪರೋಕ್ಷವಾಗಿ ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಅಮಂಗಳೆಯರೆಂದು ನಿಂದಿಸುತ್ತದೆ. ಈ ನಾಡಿನ ಸಾಹಿತ್ಯ ತಲೆ ತಲಾಂತರಗಳಿಂದ ವಿಧವೆಯರಿಗಾಗುವ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಾ ಬಂದಿದೆ. ಕನ್ನಡದ ಪ್ರಪ್ರಥಮ ಕಾದಂಬರಿಯೆಂದು ಗುರುತಿಸಿಕೊಂಡಿರುವ ‘ಇಂದಿರಾಬಾಯಿ’ ವಿಧವಾ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬರೆಯಲಾಗಿದೆ. ವಿಧವೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಾ ಬಂದಿರುವ ಶೋಷಣೆಯನ್ನು ಕನ್ನಡ ಸಾಹಿತ್ಯ ಪ್ರತಿಭಟಿಸಿದಷ್ಟು ಇನ್ನಾವ ಭಾಷೆಯ ಸಾಹಿತ್ಯಗಳೂ ಪ್ರತಿಭಟಿಸಿಲ್ಲ. ಹೀಗಿರುವಾಗ, ಧಾರವಾಡದಲ್ಲಿ ನಡೆಯುವ ಸುಮಂಗಲಿಯ ಪೂರ್ಣಕುಂಭ ಸ್ವಾಗತ ನಾಡಿಗೆ ಯಾವ ಸಂದೇಶವನ್ನು ನೀಡುತ್ತದೆ ಎನ್ನುವುದರ ಅರಿವು ಸಂಘಟಕರಿಗೆ ಇರಬೇಕಾಗಿತ್ತು. ಇದು ತೀವ್ರ ವಿವಾದವಾದ ಬಳಿಕ ಸಮ್ಮೇಳನಾಧ್ಯಕ್ಷರು ‘ಪೂರ್ಣಕುಂಭ’ದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎನ್ನುವ ಬೀಸು ಹೇಳಿಕೆಯನ್ನು ನೀಡಿದ್ದಾರೆ. ಈ ಆಚರಣೆಯನ್ನು ಕಿತ್ತು ಹಾಕುವ ಯಾವ ಭರವಸೆಯನ್ನೂ ಅವರು ನೀಡಿಲ್ಲ.

 ಇಷ್ಟಕ್ಕೂ ಪೂರ್ಣ ಕುಂಭ ಸ್ವಾಗತದ ಹಿನ್ನೆಲೆಯೇ ‘ಸುಮಂಗಲಿ’ಯರ ಹೆಗ್ಗಳಿಕೆಯನ್ನು ಎತ್ತಿ ಹಿಡಿಯುವುದು ಮತ್ತು ಪುರುಷ ಪ್ರಾಧಾನ್ಯವನ್ನು ಸಾರುವುದು. ಈ ಆಚರಣೆಗೆ ಯಾವುದೇ ಸಾಹಿತ್ಯಕ, ಸಾಂಸ್ಕೃತಿಕ ಹಿನ್ನೆಲೆಯಿಲ್ಲ. ವೈದಿಕ ಧರ್ಮ ಪೋಷಿಸಿಕೊಂಡು ಬಂದ ಸಂಪ್ರದಾಯ ಇದಾಗಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ವೈದಿಕ ಸಂಕೇತಗಳನ್ನು ತುರುಕಿಸುವ ಕುರಿತಂತೆ ಈ ಹಿಂದೆಯೂ ಹಲವು ಬಾರಿ ಆಕ್ಷೇಪಗಳು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್ ಸಕಲ ಕನ್ನಡಿಗರಿಗೆ ಸೇರಿದ್ದು. ಇವರಲ್ಲಿ ನಾಸ್ತಿಕರಿರಬಹುದು ಅಥವಾ ಬೇರೆ ಬೇರೆ ನಂಬಿಕೆಗಳನ್ನು ಹೊಂದಿದವರು ಸೇರಿರಬಹುದು. ಅವರೆಲ್ಲರನ್ನು ಕನ್ನಡದ ಹೆಸರಿನಲ್ಲಿ ಒಟ್ಟು ಸೇರಿಸುವ ಮಹತ್ತರ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಹೊಂದಿದೆ. ಸರಕಾರದ ಖಜಾನೆಯಿಂದಲೂ ಈ ಸಮ್ಮೇಳನಕ್ಕಾಗಿ ದೊಡ್ಡ ಮಟ್ಟದ ಅನುದಾನ ಸಿಗುತ್ತದೆ. ಅದು ಅನುದಾನ ನೀಡುತ್ತಿರುವುದು ಕನ್ನಡದ ಕಾರ್ಯಕ್ರಮ ಎನ್ನುವ ಕಾರಣಕ್ಕಾಗಿ. ಇಲ್ಲಿ ಕನ್ನಡ ಅಸ್ಮಿತೆ, ಕನ್ನಡ ಸಂಕೇತಗಳೇ ಮುಖ್ಯವಾಗಬೇಕು. ಆದರೆ ಕಳೆದ ಕೆಲವು ದಶಕಗಳಿಂದ ನಿಧಾನಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದೊಳಗೆ ವೈದಿಕ ಸಂಕೇತಗಳು, ಆಚರಣೆಗಳು ಸೇರಿಕೊಳ್ಳುತ್ತಿವೆ. ಕುವೆಂಪು ಅವರಂತಹ ಮಹಾನ್ ಕವಿಗಳು, ವೈದಿಕ ಡಂಭಾಚಾರಗಳನ್ನು ಕಟುವಾಗಿ ಟೀಕಿಸಿದವರು. ಪುರೋಹಿತ ವ್ಯವಸ್ಥೆ ಮತ್ತು ಸರ್ವಾಧಿಕಾರಿ ಪ್ರಭುತ್ವ ಅಳಿದರೇನೇ ಜಗತ್ತಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ವಾದಿಸಿದವರು. ಸಾಹಿತ್ಯ ಸಮ್ಮೇಳನಕ್ಕೆ ಬಂದೊದಗಿರುವ ಸದ್ಯದ ದುರ್ಗತಿಯನ್ನು ನೋಡಿದರೆ ಕುವೆಂಪು ಆತ್ಮ ಅದೆಷ್ಟು ನೊಂದೀತು?

 ಸಾಹಿತ್ಯ ಸಮ್ಮೇಳನಗಳು ಅಧೋಗತಿ ಹಿಡಿದದ್ದು ಹರಿಕೃಷ್ಣ ಪುನರೂರು ಅಧ್ಯಕ್ಷರಾದ ಕಾಲದಿಂದ. ದೇವಳದ ಧರ್ಮದರ್ಶಿಯಾಗಿಯೂ ಗುರುತಿಸಿಕೊಂಡಿದ್ದ ಪುನರೂರು ಒಳ್ಳೆಯ ಸಂಘಟಕರೇನೋ ಹೌದು. ಅವರ ಕಾಲದಲ್ಲಿ ಅಚ್ಚು ಕಟ್ಟಾಗಿ ಸಮ್ಮೇಳನ ನಡೆಯಿತು. ಆದರೆ ಸಾಹಿತ್ಯ ಸಮ್ಮೇಳನದ ಆತ್ಮ ನಾಶವಾದದ್ದು ಇದೇ ಸಂದರ್ಭದಲ್ಲಿ. ಶಾಲೆಯ ಆವರಣದಲ್ಲಿ, ಬಯಲಲ್ಲಿ ನಡೆಯುತ್ತಿದ್ದ ಸಮ್ಮೇಳನಗಳು ದೇವಸ್ಥಾನದಲ್ಲಿ ಆರಂಭವಾಗ ತೊಡಗಿತು. ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದಿದೆಯಾದರೂ, ಪುರೋಹಿತರು, ವೈದಿಕರೇ ಆ ಸಮ್ಮೇಳನಗಳ ಮುಂಚೂಣಿಯಲ್ಲಿದ್ದರು. ಸಾಹಿತ್ಯ ಈ ಮೂಲಕ ವೈದಿಕರ ಸೇವೆಗೆ ಬಹಿರಂಗವಾಗಿಯೇ ಇಳಿಯಿತು. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲು ಹೊರಟಿರುವ ಪೂರ್ಣ ಕುಂಭ ಸ್ವಾಗತವೂ ಅದರ ಮುಂದುವರಿದ ಭಾಗವೇ ಆಗಿದೆ. ಹಿಂದೆ ಸ್ವಾಮೀಜಿಗಳನ್ನು, ರಾಜರನ್ನು ಸ್ವಾಗತಿಸಲು ಇಂತಹ ತರುಣಿಯರನ್ನು ಮುಂದೆ ನಿಲ್ಲಿಸಲಾಗುತ್ತಿತ್ತು. ಅವರು ‘ಸುಮಂಗಲಿ’ಯರಾಗಬೇಕಾದುದು ಕಡ್ಡಾಯವಾಗಿತ್ತು.

ವಿಧವೆಯ ಹಣೆಪಟ್ಟಿ ಹೊತ್ತವರಿಗೆ ಇಂತಹ ‘ಶುಭ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವೂ ಇದ್ದಿರಲಿಲ್ಲ. ಈ ಸುಮಂಗಲಿಯರ ಮುಖದರ್ಶನದಿಂದ ಬಂದ ಅತಿಥಿಗಳು ಸಂಪನ್ನರಾಗುತ್ತಾರೆ ಎನ್ನುವುದು ಆಚರಣೆಯ ಹಿಂದಿರುವ ಜೀವವಿರೋಧಿ ವೌಲ್ಯ. ಇದೀಗ ಯಾರು ಬೇಕಾದರೂ ಈ ಪೂರ್ಣ ಕುಂಭದಲ್ಲಿ ಭಾಗವಹಿಸಬಹುದು ಎನ್ನುವ ಸಮ್ಮೇಳನಾಧ್ಯಕ್ಷರ ಮಾತು ನುಣುಚಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಪೂರ್ಣಕುಂಭ ಸ್ವಾಗತಕ್ಕೆ ಒಂದು ನಿರ್ದಿಷ್ಟ ಧಾರ್ಮಿಕ ಉದ್ದೇಶ ಇರುವಾಗ, ಯಾರು ಬೇಕಾದರೂ ಸ್ವಾಗತಿಸಿದರೆ ಅದು ಪೂರ್ಣಕುಂಭ ಸ್ವಾಗತವಾಗುವುದಾದರೂ ಹೇಗೆ? ಇಷ್ಟಕ್ಕೂ ಕಸಾಪ ಅಧ್ಯಕ್ಷರು ಹೇಳಿದರು ಎಂದಾಕ್ಷಣ ಸ್ವಾಗತ ಮೆರವಣಿಗೆಯಲ್ಲಿ ವಿಧವೆಯರು ಸೇರಿಕೊಳ್ಳುತ್ತಾರೆಯೇ? ಸರಿ, ಸೇರಿಕೊಂಡರು ಎಂದಿಟ್ಟುಕೊಳ್ಳೋಣ. ಅಲ್ಲಿ ಅವರಿಗೆ ಅವಮಾನವಾದರೆ ಅದರ ಹೊಣೆಯನ್ನು ಕಸಾಪ ಅಧ್ಯಕ್ಷರು ಹೊತ್ತುಕೊಳ್ಳಲು ಸಿದ್ಧರಿದ್ದಾರೆಯೇ?

ಇಂದು ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ವೈದಿಕ ಸಂಪ್ರದಾಯಗಳ ವೈಭವೀಕರಣ, ಜಂಬೂಸವಾರಿಯ ಹೆಸರಿನಲ್ಲಿ ರಾಜ ಪ್ರಭುತ್ವದ ವೈಭವೀಕರಣ ನಡೆಯುತ್ತಲೇ ಬರುತ್ತಿದೆ. ಆದರೆ ಕನಿಷ್ಠ ಕನ್ನಡ ಸಾಹಿತ್ಯದ ಹೆಸರಿನಲ್ಲಿ ನಡೆಯುವ ಕಾರ್ಯಗಳೂ ಅವುಗಳಿಗೆ ಬಲಿಯಾಗಬಾರದು. ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡುವುದು, ಮಹಿಳೆಯರನ್ನು ಸ್ವಾಗತಕ್ಕಿಡುವುದು ಇವೆಲ್ಲ ರಾಜ ಪ್ರಭುತ್ವದ ಕಾಲದ ಪದ್ಧತಿಗಳು. ಕನಿಷ್ಠ ಆಯಾ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳು ಇದರ ವಿರುದ್ಧ ಮಾತನಾಡಬೇಕಾಗಿದೆ. ಸಂಘಟಕರು ಪಲ್ಲಕ್ಕಿಯಲ್ಲಿ ಹೊರಿಸಲು ಮುಂದಾದಾಕ್ಷಣ, ಆ ಪಲ್ಲಕ್ಕಿಯಲ್ಲಿ ಹೋಗಿ ಕುಳಿತುಕೊಳ್ಳುವ ಸಾಹಿತಿಗಳ ಮನಸ್ಥಿತಿಯಾದರೂ ಎಂತಹುದು? ಇವರ ಬರಹಗಳು ಸಮಾಜವನ್ನು ಯಾವ ದಿಕ್ಕಿಗೆ ಮುನ್ನಡೆಸಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಆಚರಣೆಗಳ ಜೊತೆಗೆ ಕಳೆದುಹೋಗುವ ಸಾಹಿತ್ಯ ಸಮ್ಮೇಳನ ಸಮಾಜವನ್ನು ಇನ್ನಷ್ಟು ಸಂಕುಚಿತಗೊಳಿಸುತ್ತದೆ. ಇದಕ್ಕಾಗಿ ಸರಕಾರವೇಕೆ ಕೋಟಿಗಟ್ಟಳೆ ಹಣವನ್ನು ವ್ಯಯ ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News