ಶತಮಾನೋತ್ಸವದ ಸಂಭ್ರಮದಲ್ಲಿ ಅಂಜುಮನ್ ಸಂಸ್ಥೆ
ಭಟ್ಕಳ, ಜ.3: ಕಳೆದ ನೂರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಜ್ಞಾನಾಮೃತವನ್ನು ಉಣಬಡಿಸುತ್ತಿರುವ ಭಟ್ಕಳದ ಪ್ರತಿಷ್ಠಿತ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗೆ 2019ನೇ ವರ್ಷ ಶತಮಾನೋತ್ಸವದ ಸಂಭ್ರಮವಿದ್ದು, ಜ.5ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
1919ರಲ್ಲಿ ಸಮಾಜಿಕ ಕಳಕಳಿ ಮತ್ತು ಸಮುದಾಯದ ಏಳಿಗೆಯ ಹಿತದೃಷ್ಟಿಯಿಂದ ಹುಟ್ಟಿಕೊಂಡ ಅಂಜುಮನ್ ಸಂಸ್ಥೆ ಅಂದಿನಿಂದ ಇಂದಿಗೂ ಹಿಂತಿರುಗಿ ನೋಡಿದ್ದೆ ಇಲ್ಲ. ಕೇವಲ 8 ವಿದ್ಯಾರ್ಥಿಗಳಿಂದ ಆರಂಭಗೊಂಡಿರುವ ಈ ಸಂಸ್ಥೆ ಪ್ರಸ್ತುತ 8ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ಕೆಜಿಯಿಂದ ಪಿಜಿ ವರೆಗೆ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಸೇರಿದಂತೆ ಒಟ್ಟು 22 ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕುವುದರ ಮೂಲಕ ಈ ಭಾಗದ ಜನರ ಜ್ಞಾನದಾಹವನ್ನು ನೀಗಿಸುವ ಕೈಂಕರ್ಯವನ್ನು ಕೈಗೊಂಡಿದೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ ಸಾಹೇಬ್, ‘ಸಂಸ್ಥೆಯ ಪ್ರಾರಂಭಿಕ ಹಂತದಲ್ಲಿ ಪ್ರಾಥಮಿಕ ತರಗತಿಯಿಂದ ಆರಂಭಿಸಿ ಇಂದಿನ ಆಧುನಿಕ ಶೈಕ್ಷಣಿಕ ಯುಗದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಮಾಧ್ಯಮಿಕ, ಪ್ರೌಢ, ಪದವಿಪೂರ್ವ, ಪದವಿ, ಸ್ನಾತಕೋತ್ರ, ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ ಎಂದರು. ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಸ್ಥೆಯಿಂದ ಶಿಕ್ಷಣವನ್ನು ಪಡೆದ ಎಲ್ಲರಿಂದ ಅಭಿಪ್ರಾಯಗಳನ್ನು ಪಡೆಯುವುದರ ಮೂಲಕ ಮುಂದಿನ ಗುರಿಯನ್ನು ತಲುಪು ಪ್ರಯತ್ನವನ್ನು ಮಾಡಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ನಮ್ಮ ಸಂಸ್ಥೆ ಇಷ್ಟು ಎತ್ತರದಲ್ಲಿ ಬೆಳೆಯಲು ಕಾರಣೀಕರ್ತರಾದ ಸಿಬ್ಬಂದಿ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಅಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಓದಿರಿ ನಿಮ್ಮ ಪ್ರಭುವಿನ ನಾಮದಿಂದ ಎಂದ ದಿವ್ಯವಾಣಿಯ ಮೇಲೆ ಅಚಲ ನಂಬಿಕೆಯನ್ನಿಟ್ಟ ಸಮುದಾಯದ ಮುಖಂಡರು ಸಮುದಾಯದ ಎಲ್ಲರನ್ನು ಓದುವಂತೆ ಪ್ರೇರೇಪಿಸಿದರು. ಕೇವಲ ಮದ್ರಸಾ ಶಿಕ್ಷಣಕ್ಕೆ ಸೀಮಿತರಾಗಿದ್ದ ಮತ್ತು ಅದಕ್ಕೂ ಹೆಚ್ಚು ಒತ್ತು ನೀಡುತ್ತಿದ್ದ ಕಾಲದಲ್ಲಿ ಅಂಜುಮನ್ ಸಂಸ್ಥೆ ಮದ್ರಸಾ ಶಿಕ್ಷಣದ ಜತೆಗೆ ಕುರ್‌ಆನ್ ಮತ್ತು ಹದೀಸ್ ಮಾತ್ರವಲ್ಲ, ಖಗೋಳಶಾಸ್ತ್ರ, ಭೌತಶಾಸ್ತ್ರ, ತತ್ತ್ವಶಾಸ್ತ್ರ, ಗಣಿತಶಾಸ್ತ್ರ, ಮುಂತಾದ ವಿಷಯಗಳಲ್ಲಿ ವಿಭಿನ್ನವಾದ ವಿಷಯಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.
ಒಂದು ಶತಮಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಈ ಸಂಸ್ಥೆ ಪ್ರಮುಖಪಾತ್ರ ವಹಿಸಿದೆ. ಸಮಯದ ಅಗತ್ಯತೆ ಮತ್ತು ಸಮುದಾಯದ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ, ಅಂಜುಮನ್ ತನ್ನ ಪ್ರಾರಂಭದಿಂದ ಇಂದಿನವರೆಗೆ ಸುಮಾರು 22 ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳನ್ನು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಒಗ್ಗಿಕೊಳ್ಳುವಂತೆ ಮಾಡುವುದು, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಾಗಲು ತನ್ನ ಪಠ್ಯಕ್ರಮವನ್ನು ರೂಪಿಸಿಕೊಂಡಿದೆ. ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಮೇಲೆ ರಾಜಿ ಮಾಡಿಕೊಳ್ಳದೆ ಮಹಿಳೆಯರಿಗೆ ಶಿಕ್ಷಣ ನೀಡುವಂತೆ ಅಂಜುಮನ್ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಮಹಿಳಾ ಬೋಧನಾ ವಿಭಾಗದವರು ಮಾತ್ರ ಕಲಿಸುವ ಮಹಿಳೆಯರಿಗಾಗಿ ಪ್ರತ್ಯೇಕವಾದ ಉನ್ನತ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಅಂಜುಮನ್ ಸಂಸ್ಥೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ ಒಳಾಂಗಣ ಮತ್ತು ಹೊರಾಂಗಣ ಕ್ರೆಡೆಗಳು, ಚರ್ಚೆ, ಧಾರ್ಮಿಕ ಶಿಕ್ಷಣ, ಸಾಮಾಜಿಕ ಮತ್ತು ರಾಷ್ಟ್ರೀಯ ಸೇವೆ, ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಸಹ ಇದು ಒತ್ತು ನೀಡುತ್ತದೆ. ಇಂಜಿನಿಯರಿಂಗ್ ಮತ್ತು ಡಿಗ್ರಿ ಕಾಲೇಜುಗಳಿಗೆ ಹಾಸ್ಟೆಲ್ ಒದಗಿಸುವ ಮೂಲಕ ಯೋಗ್ಯ ಶೈಕ್ಷಣಿಕ ಪರಿಸರವನ್ನು ಒದಗಿಸಿದೆ. ಮುಸ್ಲಿಮರನ್ನು ಭಾರತದ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಅಂಜುಮನ್ ಹಾಮಿಯೇ ಮುಸ್ಲಿಮೀನ್ ತನ್ನ ಶತಮಾನದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದೆ.
ಎಲ್ಲ ಸಮುದಾಯಕ್ಕೂ ಶಿಕ್ಷಣ
ಅಂಜುಮನ್ ಸಂಸ್ಥೆ ಕೇವಲ ಸಮುದಾಯದ ಏಳಿಗೆ ಅಥವಾ ಒಂದು ಸಮುದಾಯಕ್ಕೆ ಸೀಮಿತಗೊಂಡ ಸಂಸ್ಥೆಯಲ್ಲ. ಬದಲಾಗಿ ಇಲ್ಲಿ ಎಲ್ಲ ಧರ್ಮ, ಜಾತಿ, ಸಂಸ್ಕೃತಿಯ ಜನರು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇಲ್ಲಿ ಶಿಕ್ಷಣ ಸೇವೆ ಸಲ್ಲಿಸಲು ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮದವರಿಗೂ ಅಂಜುಮನ್ ಸಂಸ್ಥೆ ಅವಕಾಶ ನೀಡುತ್ತಿದೆ. ಶಿಕ್ಷಣದ ಗುಣಮಟ್ಟದ ಮೇಲೆ ಅದು ಎಂದಿಗೂ ರಾಜಿ ಮಾಡಿಕೊಳ್ಳದೆ ಶಿಕ್ಷಣ ಸೇವೆ ಮುಂದುವರಿಸುತ್ತಿದೆ.
ಅಂಜುಮನ್ ಲೋಗೋ
ಇಸ್ಲಾಮಿಕ್ ಸಂಸ್ಕೃತಿ ಬಿಂಬಿಸುವ ಉದಯಿಸುತ್ತಿರುವ ಚಂದ್ರ ಮತ್ತು ನಕ್ಷತ್ರ. ಅದರ ಕೆಳಗೆ ಇರುವ ಗ್ರಂಥವು ಜ್ಞಾನವನ್ನು ಸಂಕೇತಿಸುತ್ತಿದೆ. ಭಟ್ಕಳದ ಬೌಗೋಳಿಕ ಸೌಂದರ್ಯವನ್ನು ಲೈಟ್ ಹೌಸ್, ಅರೆಬಿಯನ್ ಸಮುದ್ರದ ಪಶ್ಚಿಮ ತೀರದಲ್ಲಿಯ ತೆಂಗಿನ ಮರಗಳು ಪ್ರತಿನಿಧಿಸುತ್ತದೆ. ಈ ಪ್ರದೇಶದ ಶ್ರೆಮಂತ ಸಾಂಸ್ಕೃತಿಕ ಪರಂಪರೆಯು, ಐತಿಹಾಸಿಕಗಿ ಸಮುದ್ರ ತೀರದ ಮೂಲಕ ಪ್ರಯಾಣಿಸುತ್ತಿದ್ದ ಮತ್ತು ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರ ಕೊಡುಗೆಯಾಗಿದೆ. ಜಲಾಶಯದಲ್ಲಿರುವ ನೀರು ಜ್ಞಾನವನ್ನು ಸೂಚಿಸುತ್ತದೆ, ಅದು ಜ್ಞಾನದಾಹಿಗಳ ದಾಹವನ್ನು ನೀಗಿಸುತ್ತದೆ. ಚಕ್ರಗಳು ಮತ್ತು ವಿದ್ಯುತ್ ಗೋಪುರವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ವೇಗವನ್ನು ಸಂಕೇತಿಸುತ್ತವೆ.
ಅಂಜುಮನ್ ಸಂಸ್ಥೆಯ ತ್ರಿಮೂರ್ತಿಗಳು
ಮಾಜಿ ಹಣಕಾಸು ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದ ಎಸ್.ಎಂ.ಯಹ್ಯ, ಶಿಕ್ಷಣ ತಜ್ಞ ಎಂ.ಎ.ಘನಿ ಸಾಹೇಬರು ಹಾಗೂ ಅಂಜುಮನ್ ಶತಮಾನೋತ್ಸವ ಆಚರಣೆಯ ಅಧ್ಯಕ್ಷರಾಗಿರುವ ಎಸ್.ಎಂ.ಸೈಯ್ಯದ್ ಖಲೀಲುರ್ರಹ್ಮಾನ್ ಆಧುನಿಕ ಅಂಜುಮನ್ ಸಂಸ್ಥೆಯ ನಿರ್ಮಾತೃರು ಎಂದೇ ಹೇಳಬಹುದು. ಎಸ್.ಎಂ.ಯಾಹ್ಯಾರ ಕಾಲದಲ್ಲಿ ಅಂಜುಮನ್ ಸಂಸ್ಥೆ ಒಂದು ಹೊಸ ರೂಪವನ್ನು ಪಡೆದುಕೊಂಡಿತು. ಅಲ್ಲಿವರೆಗೆ ಕೇವಲ ಪ್ರೌಢಶಾಲೆಗೆ ಮಾತ್ರ ಸೀಮಿತಗೊಂಡಿದ್ದ ಸಂಸ್ಥೆ ಮುಂದೆ ಪದವಿ ಕಾಲೇಜು, ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ಬಹಳ ಪ್ರಮುಖವಾಗಿದೆ. ನಂತರ ದಿನಗಳಲ್ಲಿ ಹಲವು ಅವಧಿಗೆ ಅಧ್ಯಕ್ಷರಾಗಿದ್ದ ಎಂ.ಎ.ಘನಿ ಸಾಹೇಬರು ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಿದರು. ಎಸ್.ಎಂ.ಖಲೀಲ್ ಸಾಹೇಬರಂತೂ ತಮ್ಮ ತನುಮನ ಧನವನ್ನು ಸಂಸ್ಥೆಗೆ ಧಾರೆಯರೆದು ಅದನ್ನು ಹೆಮ್ಮರವನ್ನಾಗಿ ಬೆಳೆಸಿದ್ದಾರೆ.
ಭಟ್ಕಳದ ಆಸುಪಾಸಿನ ವಿದ್ಯಾರ್ಥಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಿಕ್ಷಣವನ್ನು ಒದಗಿಸಿ ಅವರನ್ನು ದೇಶದ ಸಮರ್ಥ ಪ್ರಜೆಗಳನ್ನಾಗಿ ಮಾಡುವ ಸದುದ್ದೇಶದಿಂದ ಸಮಾಜದ ಪ್ರಮುಖರೂ, ಶಿಕ್ಷಣ ಪ್ರೇಮಿಗಳೂ ಆಗಿರುವ ಎಂ.ಎಂ.ಸಿದ್ದೀಕ್, ಡಿ.ಎಚ್.ಸಿದ್ದೀಕ್ ಮತ್ತು ಎಫ್.ಎ.ಹಸನ್ ಅವರು 1919ರಲ್ಲಿ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
-ಅಬ್ದುಲ್ ರಹೀಮ್ ಜುಕಾಕೋ ಸಾಹೇಬ್, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ
ನೂರು ವರ್ಷ ಇತಿಹಾಸವಿರುವ ಸಾವಿರಾರು ಮೈಲು ದೂರ ಕ್ರಮಿಸಿರುವ ಈ ಶಿಕ್ಷಣ ಸಂಸ್ಥೆ. ರಾಷ್ಟ್ರದ ಮತ್ತು ಸಮುದಾಯದ ಪ್ರಗತಿ, ಸಮೃದ್ಧಿಯತ್ತ ಸಾಗಿಸುವ ಹೆದ್ದಾರಿ ಎಂದು ಭಾವಿಸಿ ಮುನ್ನೆಡೆಸಿದೆ. ಮುಸ್ಲಿಮರ ಶಿಕ್ಷಣ ಕುರಿತಾದ ನಿರಾಸಕ್ತಿ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕಿರುವ ಅಡತಡೆಗಳನ್ನು ಭೇದಿಸಿ ಭಟ್ಕಳದಂತಹ ಪ್ರದೇಶದಲ್ಲಿ ಹೆಣ್ಣುಮಕ್ಕಳ ಧಾರ್ಮಿಕ ಶಿಕ್ಷಣದ ಜೊತೆಗೆ ಔಪಚಾರಿಕ ಶಿಕ್ಷಣವನ್ನು ಪರಿಚಯಿಸುವುದರ ಮೂಲಕ ಹೆಣ್ಣುಮಕ್ಕಳನ್ನು ಶಿಕ್ಷಣದ ಉತ್ತುಂಗ ಶಿಖರಕ್ಕೇರುವಂತೆ ಮಾಡಿದ್ದು ಅಂಜುಮನ್ ಸಂಸ್ಥೆಯ ನೂರು ವರ್ಷಗಳ ಸಾಧನೆಯೆ ಸರಿ.
-ಸಿದ್ದೀಕ್ ಇಸ್ಮಾಯೀಲ್, ಅಂಜುಮನ್,ಸಂಸ್ಥೆಯ ಪ್ರಧಾ ನಕಾರ್ಯದರ್ಶಿ