ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣವಾಗಲಿ: ಡಾ.ಚಂದ್ರಶೇಖರ ಕಂಬಾರ
ಧಾರವಾಡ, ಜ.4: ಒಂದರಿಂದ ಏಳನೇ ತರಗತಿವರೆಗಿನ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ. ಹೀಗಾಗಿ, ಕನ್ನಡವನ್ನು ಪ್ರಾಥಮಿಕ ಪೂರ್ವವರೆಗೆ (1 ರಿಂದ 7 ನೆ ತರಗತಿವರೆಗೆ) ರಾಷ್ಟ್ರೀಕರಣ ಮಾಡಬೇಕು ಎಂದು ನುಡಿದರು.
ರಾಷ್ಟ್ರೀಕರಣದ ಜತೆಗೆ ತುರ್ತಾಗಿ ತೀವ್ರವಾಗಿ ಸರಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು ಎಂದ ಅವರು, ಅನಂತರದ 8 ನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ ಎಂದು ಹೇಳಿದರು.
ರಾಜ್ಯದ ರಕ್ಷಣೆ ಸರಕಾರದ್ದು: ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರಕಾರದ್ದು. ಇದನ್ನರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದದ್ದು. ಸರಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು ಎಂದು ಪ್ರತಿಪಾದಿಸಿದರು.
ರಾಜ್ಯಭಾಷೆಯ ವಿಚಾರದಲ್ಲಿ ಎಷ್ಟು ಶ್ರಮಿಸಿದರೂ ಸಾಲದೆಂದು, ಎಷ್ಟು ಪ್ರೋತ್ಸಾಹ ಕೊಟ್ಟರೂ ಅದೆಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದೆಂದು ಕುವೆಂಪು ಹೇಳಿದ್ದಾರೆ. “ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡು ಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಟ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ ಎಂದು ಗಾಂಧೀಜಿ ಹೇಳಿದ್ದರು. ಅಲ್ಲದೆ ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದರು.
ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ. ಈ ಮಧ್ಯೆ ನಾಡಿನ ನದಿಗಳಲ್ಲಿ ಬೇಕಾದಷ್ಟು ನೀರು ಹರಿಯಿತು. ಶಾಲೆಗಳಲ್ಲಿ ಮಾತೃಭಾಷೆ, ರಾಜ್ಯಭಾಷೆ ಮತ್ತು ಕಲಿಕೆಯ ಭಾಷೆ ಯಾವುದಾಗಬೇಕೆಂದು ಜನರು, ಶಿಕ್ಷಣ ತಜ್ಞರು, ಗೋಕಾಕ ವರದಿ ಇತ್ಯಾದಿಗಳಾಗಿ ಕೊನೆಗೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ಅಂತೂ ತೀರ್ಮಾನ ಹೊರಬಿದ್ದಾಗ ಕನ್ನಡ ಭಾಷೆಯ ಕುತ್ತಿಗೆಗೇ ಸಂಕಟ ಬಂದುದು ಗೊತ್ತಾಯಿತು. ಆಗ ಜನಪ್ರತಿನಿಧಿಗಳು, ಶಾಸಕರು ನಾಡಿನ ಮಕ್ಕಳ ಬಗ್ಗೆ ಅಪಾರವಾದ ಆಸಕ್ತಿ ತಳೆದರು. ಇಂಗ್ಲಿಷು ಅನ್ನದ ಭಾಷೆ. ಇಂಗ್ಲಿಷಿನಲ್ಲಿ ಓದಿದವರು ವಿಶಾಲ ಪ್ರಪಂಚದ ನಾಗರಿಕರಾಗುವರೆಂದು ಪ್ರಪಂಚದ ಯಾವುದೇ ಭಾಗದಲ್ಲಿ ನೌಕರಿ ಮಾಡಲು ಅರ್ಹರಾಗುವರೆಂದು, ಅವರ ಚಿಂತನೆ ವಿಶ್ವವ್ಯಾಪಿಯಾಗುವುದೆಂದು ಪ್ರಚಾರ ಮಾಡಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸಿ ಆ ಕಡೆಗೆ ಮಕ್ಕಳನ್ನು ಸೆಳೆಯತೊಡಗಿದ್ದಾರೆ ಎಂದು ಅಪಾದಿಸಿದರು.
ಅದರ ಪರಿಣಾಮ ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳು ಹಳ್ಳಿ ಹಳ್ಳಿಗಳಲ್ಲಿ ಆರಂಭವಾಗತೊಡಗಿವೆ. ಅಲ್ಲದೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳೇ ಹೆಚ್ಚು ಇದ್ದಾರೆ. ಈ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿವೆ ಎಂದರು.
ಸರಕಾರಿ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚುಗಳು, ಕಂಪ್ಯೂಟರ್ ಗಳು ಬರಬೇಕಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕಿತ್ತು. ಆದರೆ ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ. ಸರಕಾರದ ಕನ್ನಡ ಶಾಲೆಗಳು ಮುಚ್ಚಿ ಖಾಸಗಿ ಇಂಗ್ಲಿಷ್ ಶಾಲೆಗಳು ಎದ್ದು ಕಾಣುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ಕಡಿಮೆಯಾಗಿ, ಇಂಗ್ಲೀಷ್ ಶಾಲೆಗಳಿಗೆ ಸೇರಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ. ಅಷ್ಟೇ ಅಲ್ಲದೆ, ಪ್ರತಿವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳನ್ನು ಸರಕಾರವೇ ಶುಲ್ಕ ಕೊಟ್ಟು ಆರ್‍ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದೆ. 2018-19ರ ಅವಧಿಯಲ್ಲಂತೂ ಸುಮಾರು ಮೂರುವರೆ ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದ ಭಯಾನಕ ಸುದ್ದಿ ಹೊರಬಿದ್ದಿದೆ ಎಂದ ಕಂಬಾರರು, ನಿಜವಾಗಿ ಈಗಿಂದೀಗ ಇಂಗ್ಲೀಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಸರಕಾರದ ಜಾಣ ಮೌನ: ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಅಧಿಕವಾಗುವ ಕುರಿತು ಹಾಗೂ ಮಾಧ್ಯಮ ಶಾಲೆಗಳ ಪಲ್ಲಟದ ಕುರಿತು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಮಾಧ್ಯಮದ ಎದುರಿಗೆ ಪ್ರಶ್ನಿಸಿದರೆ ಅಕಾಡೆಮಿ ಬೇಕೇ? ಪ್ರಾಧಿಕಾರ ಬೇಕೇ? ಕಾವಲು ಸಮಿತಿ ಬೇಕೇ ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೇ? ಎಂದು ಪ್ರಶ್ನೆ ಎತ್ತಿದ್ದಾರೆ.
ತಾಯಿ ನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ, ನಮ್ಮ ಖಾಸಗಿ ಶಾಲೆ ನಡೆಸುವವರನ್ನು ಹೊರತು ಪಡಿಸಿ ಶಿಕ್ಷಣ ತಜ್ಞರೆಲ್ಲ ಸರ್ವಾನುಮತದಿಂದ ಒಪ್ಪುವ ಮಾತಿದು. ಆದರೆ ಅದಕ್ಕೆ ಅಡಚಣೆಗಳಿವೆಯೆಂದೂ ಹಿಂಜರಿಯುತ್ತಾರೆ. ಕನ್ನಡ ಸಾಹಿತ್ಯವನ್ನು ಕಲಿಸಬಹುದು, ಸಂಸ್ಕೃತ ಸಾಹಿತ್ಯವನ್ನು ಕಲಿಸಬಹುದು. ಆದರೆ ಮಹತ್ವದ ವಿಷಯಗಳಾದ ಭೌತಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ತಂತ್ರಜ್ಞಾನವನ್ನು ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರಜ್ಞಾನವೆಲ್ಲ ಇಂಗ್ಲೀಷಿನಲ್ಲಿ ಲಭ್ಯವಿರುವುದರಿಂದ, ಶಿಕ್ಷಕರೆಲ್ಲ ಇಂಗ್ಲೀಷಿನಲ್ಲಿ ಕಲಿತು ಬಂದವರಾದ್ದರಿಂದ ಇಂಗ್ಲಿಷ್ ಭಾಷೆಯೇ ಇದಕ್ಕೆ ಸರಿಯಾದ ಮಾಧ್ಯಮವೆಂಬುದನ್ನು ಎಲ್ಲರೂ ದೃಢವಾಗಿ ನಂಬಿಬಿಟ್ಟಿದ್ದಾರೆ. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ನಮ್ಮ ಭಾಷೆಯೂ ಹೌದು, ನಮ್ಮ ರಾಷ್ಟ್ರದ ಸಂವಿಧಾನ ಆಂಗ್ಲ ಭಾಷೆಯನ್ನು ಭಾರತೀಯ ಭಾಷೆಯೆಂದು ಗುರುತಿಸಿದೆ. ಈ ಭಾಷೆ ವಸಾಹತುಶಾಹಿ ಇತಿಹಾಸದ ಒಂದು ಕೊಡುಗೆ ನಿಜ. ಆದರೆ ಇತಿಹಾಸವನ್ನು ಮರೆಯುವದಾದರೂ ಹೇಗೆ ಎಂದು ಹೇಳಿದರು.
ಶಿಕ್ಷಣ ಯಶಸ್ವಿಯಾಗಿ ನಡೆದು ಬಿಟ್ಟರೆ, ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವುದು ಮೂರ್ಖತನವಾಗಬಹುದು. ನಮ್ಮ ದೇಶ ಉಳಿದ ದೇಶಗಳೊಂದಿಗೆ ಪ್ರಗತಿಪಥದಲ್ಲಿ ನಡೆಯಬೇಕಾದರೆ ಆಂಗ್ಲ ಭಾಷೆ ಅನಿವಾರ್ಯವಾಗುತ್ತದೆ ಎನ್ನುವುದು ಒಂದು ವಾದ. ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎಂಬ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲೀಷ್ ಭಾಷೆಯ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ ಎಂದು ನುಡಿದರು.
ಕನ್ನಡಕ್ಕೆ ಬೇರೆ ಭಾಷೆಯ ಚಲನಚಿತ್ರಗಳನ್ನು ಡಬ್ ಮಾಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಂಡಿರುವ ನಿರ್ಣಯ ಯೋಗ್ಯವಾದುದಾಗಿದೆ. ಆದರೆ, ಕನ್ನಡದ ಟಿವಿಗಳಲ್ಲಿ ಮಕ್ಕಳಿಗೆ ಯೋಗ್ಯವಾದ ಪಾಠವಾಗುವ ವಾಹಿನಿಗಳನ್ನು ಡಬ್ ಮಾಡಬಹುದು. ಮಕ್ಕಳು ತಮಿಳು, ತೆಲುಗು ಟವಿಗಳಲ್ಲಿ ಯೋಗ್ಯವಾದ ವಾಹಿನಿಗಳನ್ನು ನೋಡುತ್ತಿದ್ದಾರೆ. ಅದರ ಬದಲಿಗೆ ಕನ್ನಡಕ್ಕೆ ಡಬ್ ಮಾಡಿ ನೋಡಿದರೆ ಒಳ್ಳೆಯದಲ್ಲವೇ..?
- ಡಾ.ಚಂದ್ರಶೇಖರ ಕಂಬಾರ, ಸಮ್ಮೇಳನಾಧ್ಯಕ್ಷ
ಸರಕಾರಿ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನಾಗಿ ಮಾಡುವುದರ ಬದಲಿಗೆ ಕನ್ನಡದಲ್ಲಿಯೇ ಶಿಕ್ಷಣವನ್ನು ನೀಡುತ್ತಾ ಅದರಲ್ಲಿ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಸಬಹುದು. ಈ ರೀತಿಯ ಶಿಕ್ಷಣದಿಂದಾಗಿ ಕನ್ನಡವನ್ನೂ ಉಳಿಸಬಹುದು. ಅಲ್ಲದೆ, ಇಂಗ್ಲೀಷ್ ಶಿಕ್ಷಣ ನೀಡಲು ಸಾಧ್ಯವಾದಂತಾಗುತ್ತದೆ.
- ನಿರ್ಮಲಾ, ಶಿಕ್ಷಕಿ