ಭಾಷೆಗಾಗಿ ಬಡವರ ಬದುಕಿನಲ್ಲಿ ಚೆಲ್ಲಾಟ ಬೇಡ: ಮುಖ್ಯಮಂತ್ರಿ ಕುಮಾರಸ್ವಾಮಿ
ಧಾರವಾಡ, ಜ.4: ಕನ್ನಡ ಭಾಷೆ ಉಳಿಸಲು ನಾವೆಲ್ಲರೂ ಬದ್ಧರಾಗಿರೋಣ. ಆದರೆ, ಭಾಷೆಯ ಹೆಸರಿನಲ್ಲಿ ಬಡವರ ಬದುಕಿನಲ್ಲಿ ನಾವ್ಯಾರೂ ಚೆಲ್ಲಾಟವಾಡಬಾರದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ನಗರದ ಕೃಷಿ ವಿಶ್ವವಿದ್ಯಾಲಯದ ಆವರನದಲ್ಲಿ ಆಯೋಜಿಸಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಜೀವವಿರುವವರೆಗೆ ಕನ್ನಡಕ್ಕೆ ಕುತ್ತು ತರುವಂತಹ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಕೂಡಿ ಶ್ರಮಿಸೋಣವೆಂದು ತಿಳಿಸಿದರು.
ಕನ್ನಡ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ಸಿಗದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಾಸ್ತವ. ಇತ್ತೀಚೆಗೆ ಹೈ-ಕರ್ನಾಟಕದ ಸಾವಿರಾರು ಮಂದಿ ಅಭ್ಯರ್ಥಿಗಳು ಶಿಕ್ಷಕರ ಹುದ್ದೆಗಾಗಿ ಬರೆದ ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದಾರೆ. ಇವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ಹೆಚ್ಚು ಜ್ಞಾನ ಇಲ್ಲದಿರುವುದರಿಂದ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಹಾಗೂ ಸರಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ಆಟೋ ಚಾಲಕ, ಕೂಲಿ ಕಾರ್ಮಿಕ ತನ್ನ ಮಕ್ಕಳಿಗೆ ತನಗೆ ಬಂದ ಪರಿಸ್ಥಿತಿ ಬಾರದಿರಲಿ ಎಂದು ಇಂಗ್ಲಿಷ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದು ಅವರ ತಪ್ಪಲ್ಲ, ಸಮಾಜದಲ್ಲಿ ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ದೊರಕುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ಉಂಟಾಗಿರುವ ಈ ವರ್ಗೀಕರಣಕ್ಕೆ ಸಮ್ಮಿಶ್ರ ಸರಕಾರ ಕಾರಣವಲ್ಲ ಎಂದು ಅವರು ಹೇಳಿದರು.
ಈಗಿರುವ ಶಿಕ್ಷಣ ಪದ್ಧತಿಯಲ್ಲಿ ಒಂದು ವರ್ಗದ ಮಕ್ಕಳು ಗುಣಮಟ್ಟದ ಶಿಕ್ಷಣ ಮತ್ತೊಂದು ವರ್ಗದ ಮಕ್ಕಳು ಕಳಪೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಯಾವುದಾದರೊಂದು ಪರಿಹಾರ ಕೈಗೊಳ್ಳಬೇಕಾಗಿದೆ. ಹೀಗಾಗಿ ಸರಕಾರಿ ಶಾಲೆಗಳ ಶಿಕ್ಷಕರಿಗೆ ಇಂಗ್ಲಿಷ್ ಬೋಧನೆ ಕುರಿತು ವಿಶೇಷ ತರಬೇತಿ ನೀಡಲಾಗಿದೆ, ಈ ಬಗ್ಗೆ ತಾವು ಎಲ್ಲರೊಂದಿಗೂ ಮುಕ್ತ ಮನಸ್ಸಿನಿಂದ ಚರ್ಚೆಗೆ ಸಿದ್ಧನಿದ್ದೇನೆ ಎಂದು ಅವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್‍ನ (ಕಸಾಪ) ರಾಜ್ಯಾಧ್ಯಕ್ಷ ಮನುಬಳಿಗಾರ್ ಮಾತನಾಡಿ. ಲಕ್ಷಾಂತರ ಜನ ಸಮ್ಮೇಳನಕ್ಕೆ ಸಾಕ್ಷಿಯಾಗಿರುವುದು ಕನ್ನಡಕ್ಕೆ ಕೆಡುಕಿಲ್ಲ ಎನ್ನುವುದನ್ನು ತೋರಿಸುತ್ತದೆ. ಅಷ್ಟೇ ಅಲ್ಲ, ಕನ್ನಡಕ್ಕೆ ಒದಗಿಬಂದ ಸಮಸ್ಯೆ ದೂರವಾಗುತ್ತದೆ ಎಂಬ ಭರವಸೆಯನ್ನು ನೀಡಿದೆ. ಒಂದೇ ಊರಿನಲ್ಲಿ ಇಬ್ಬರು ಜ್ಞಾನಪೀಠ ಸಾಹಿತಿಗಳ ಸಮ್ಮೇಳನ ಕಸಾಪದ 104 ವರ್ಷದ ಇತಿಹಾಸದಲ್ಲಿಯೇ ಪ್ರಥಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡದ ಜ್ವಲಂತ ಸಮಸ್ಯೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ಒಂದು ಮತ್ತು ಎರಡನೇ ಶತಮಾನದಲ್ಲಿ ಈಜಿಫ್ಟ್ ನಲ್ಲಿ ಕನ್ನಡ ಪದಗಳು ದೊರೆತಿರುವುದನ್ನು ಪಾಟೀಲ ಪುಟ್ಟಪ್ಪ ಅವರು ದಾಖಲಿಸಿದ್ದರು. ಅದೇ ರೀತಿ, ಒಂದನೇ ಶತಮಾನದಿಂದ ಹತ್ತನೇ ಶತಮಾನದವರೆಗೆ ಉಳಿದ ಭಾಷೆಗೆ ಕನ್ನಡ ಒತ್ತಾಸೆಯಾಗಿ ನಿಂತಿತ್ತು ಎಂದು ಪ್ರೊ.ಎಸ್. ಶೆಟ್ಟರ್ ದಾಖಲಿಸಿದ್ದಾರೆ. ನಾಲ್ಕು-ಐದನೇ ಶತಮಾನದಲ್ಲಿ ಶಿಲಾಲಿಪಿ ಬಳಸುವಷ್ಟು ಕನ್ನಡ ಪ್ರಬುದ್ಧವಾಗಿತ್ತು. ಆ ಕಾಲದಲ್ಲಿ ಇಂಗ್ಲಿಷ್ ಉನ್ನತ ಮಟ್ಟಕ್ಕೆ ಬೆಳೆದಿರಲಿಲ್ಲ. 6-7ನೇ ಶತಮಾಣದಲ್ಲಿ ‘ಕಪ್ಪೆ ಅರಭಟ್ಟನ’ ಶಾಸನದಲ್ಲಿ ಕನ್ನಡದ ಮಹತ್ವ ಸಾರಲಾಗಿದೆ. 8-9ನೇ ಶತಮಾನದಲ್ಲಿ ‘ಕವಿರಾಜ ಮಾರ್ಗ’ದಲ್ಲಿ ಸಹ ಕನ್ನಡ ಪರಂಪರೆ ಬಗ್ಗೆ ಉಲ್ಲೇಖಿಸಲಾಗಿದೆ. 10ನೇ ಶತಮಾನದಲ್ಲಿ ಪಂಪ ನಾವೆಲ್ಲರೂ ಒಂದು ಎಂದು ಹೇಳಿದ್ದರು. 12ನೇ ಶತಮಾನದಲ್ಲಿ ವಚನಕಾರರು ಸಾಮಾಜಿಕ ಚಳವಳಿ ಮಾಡಿದರು. 15-16ನೇ ಶತಮಾನದಲ್ಲಿ ಪುರಂದರದಾಸರು ಹಾಗೂ ಕನಕದಾಸರು ಕೀರ್ತನೆ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಜ್ಞಾನಪೀಠ ಸಾಹಿತಿಗಳು ರಾಷ್ಟ್ರಕವಿಗಳು ಮಾನವೀಯತೆಯ ಸಂದೇಶ ಸಾರಿದ್ದರು ಎಂದು ಮನು ಬಳಿಗಾರ್ ಸ್ಮರಿಸಿದರು.
ಕಂದಾಯ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸ್ವಾಗತ ಕೋರಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹಿರಿಯ ಹೋರಾಟಗಾರ ಪಾಟೀಲ ಪುಟ್ಟಪ್ಪ, ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಚನ್ನಬಸಪ್ಪ ಶಿವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಚೈತ್ರಾ ಶಿರೂರ, ಶಾಸಕ ಅರವಿಂದ ಬೆಲ್ಲದ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತಿತರರಿದ್ದರು.