×
Ad

ನಟರು, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಪ್ರಕರಣ: ಪರಿಶೀಲನೆ ಬಹುತೇಕ ಪೂರ್ಣ

Update: 2019-01-04 19:58 IST

ಬೆಂಗಳೂರು, ಜ.4: ಕನ್ನಡ ಚಿತ್ರರಂಗದ ನಟರು, ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ತನಿಖಾಧಿಕಾರಿಗಳ ದಾಳಿ ಪ್ರಕರಣ ಸಂಬಂಧ ಆಸ್ತಿ ದಾಖಲೆ ಪರಿಶೀಲನೆ ಕಾರ್ಯ ಶುಕ್ರವಾರ ಬಹುತೇಕ ಪೂರ್ಣಗೊಂಡಿತು ಎಂದು ತಿಳಿದು ಬಂದಿದೆ.

ಸತತ ಎರಡು ದಿನಗಳಿಂದ ಶಿವರಾಜ್‌ ಕುಮಾರ್, ಪುನೀತ್ ರಾಜ್‌ ಕುಮಾರ್, ಸುದೀಪ್, ಯಶ್, ಇವರ ಪತ್ನಿ ರಾಧಿಕಾ ಪಂಡಿತ್, ನಿರ್ಮಾಪರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು ಅವರ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಕೆಲ ದಾಖಲಾತಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.   

ಸದಾಶಿವ ನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ನಿವಾಸದಲ್ಲಿಯೇ ಐಟಿ ಅಧಿಕಾರಿಗಳು ದಾಖಲೆಗಳು ಮತ್ತು ಕಡತಗಳಿಗೆ ಸಂಬಂಧಪಟ್ಟಂತೆ ಅವರ ಹಾಗೂ ಪತ್ನಿ ಅಶ್ವಿನಿ ಅವರ ಹೇಳಿಕೆಗಳನ್ನು ದಾಖಲಿಸಿದರು. ಜತೆಗೆ ಬ್ಯಾಂಕ್‌ಗಳಲ್ಲಿ ನಗದು ಜಮೆ ಕುರಿತು ಅಧಿಕೃತ ಪತ್ರಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅದೇ ರೀತಿ, ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ನಿವಾಸದಲ್ಲಿರುವ ನಟ ಶಿವರಾಜ್‌ ಕುಮಾರ್ ನಿವಾಸದಲ್ಲಿ ಪರಿಶೀಲನೆ ಕಾರ್ಯ ಎರಡನೆ ದಿನವು ಮುಂದುವರೆಯಿತು. ಶುಕ್ರವಾರ ಮುಂಜಾನೆಯೇ ನಿವಾಸಕ್ಕೆ ಹಾಜರಾದ, ಐಟಿ ಅಧಿಕಾರಿಗಳು, ಶಿವರಾಜ್‌ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು ಎನ್ನಲಾಗಿದೆ.

ಕಾರಿನಲ್ಲಿ ಕರೆದೊಯ್ದರು: ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು, ಬ್ಯಾಂಕ್ ಖಾತೆ ಪರೀಕ್ಷೆ ನಡೆಸುವ ಹಿನ್ನೆಲೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಮನೆಯಿಂದ ಬ್ಯಾಂಕ್‌ಗೆ ಕರೆದೊಯ್ದರು ಎಂದು ತಿಳಿದುಬಂದಿದೆ.

ಸುದೀಪ್: ಜೆಪಿ ನಗರದಲ್ಲಿರುವ ನಟ ಸುದೀಪ್ ನಿವಾಸದಲ್ಲಿ ಬರೋಬ್ಬರಿ 34 ಗಂಟೆಗೂ ಅಧಿಕ ಕಾಲ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು ಎನ್ನಲಾಗಿದೆ. ಮಹಿಳಾ ಅಧಿಕಾರಿಯೊಬ್ಬರು, ಸುದೀಪ್ ಪತ್ನಿ ಪ್ರಿಯಾ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದು, ಚಿನ್ನಾಭರಣ ಸಂಬಂಧ ಪರಿಶೋಧಕರನ್ನು ಕರೆದು ಪರಶೀಲನೆ ನಡೆಸಿ, ಅದರ ಮೊತ್ತವನ್ನು ದಾಖಲಿಸಿದರು ಎಂದು ಹೇಳಲಾಗುತ್ತಿದೆ.

ಯಶ್: ನಟ ಯಶ್ ಅವರ ಹೊಸಕೆರೆಹಳ್ಳಿಯಲ್ಲಿರುವ ಮನೆಯಲ್ಲೂ ಎರಡನೇ ದಿನವೂ ತನಿಖಾಧಿಕಾರಿಗಳು ಶೋಧ ಮುಂದುವರೆಸಿದರು. ಈ ವೇಳೆ ಐಟಿ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಸಣ್ಣ ಮೊತ್ತದ ನಗದು ಬಿಟ್ಟರೆ, ಬೇರೆ ಯಾವುದೇ ಚಿನ್ನಾಭರಣ ಪತ್ತೆಯಾಗಿಲ್ಲ ಎನ್ನಲಾಗಿದೆ.

ಸಾಲ?: ಯಶ್ ಅವರ ಎರಡು ಬ್ಯಾಂಕ್ ಖಾತೆಗಳಲ್ಲಿ 30 ಕೋಟಿ ರೂ. ಸಾಲ ಇದೆ ಎಂದು ಹೇಳಲಾಗುತ್ತಿದೆ. ಜತೆಗೆ, ಮಂಡ್ಯದ ಬಳಿ ಜಮೀನು ಖರೀದಿ ಮಾಡಿದ್ದು, ಅದರಲ್ಲಿ 8 ಎಕರೆ ನೋಂದಣಿ ಆಗಿದೆ ಎಂದು ವರದಿಯಾಗಿದೆ.

ರಾಕ್‌ಲೈನ್: ರಾಕ್‌ಲೈನ್ ವೆಂಕಟೇಶ್ ಅವರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ನಿವಾಸದ ಮೇಲೆ ಶುಕ್ರವಾರವು ಶೋಧ ಕಾರ್ಯ ಮುಂದುವರೆಸಿದ ಅಧಿಕಾರಿಗಳಿಗೆ ನೂರಾರು ಕೋಟಿ ಹೂಡಿಕೆಯ ದಾಖಲೆ ಪತ್ರಗಳ ಮಾಹಿತಿ ಲಭ್ಯವಾಗಿದೆ ಎಂದು ವರದಿಯಾಗಿದೆ. ಪತ್ನಿ ಮತ್ತು ಮಗನ ಹೆಸರಿನಲ್ಲೂ ಹೂಡಿಕೆ ಮಾಡಿದ ಕೆಲ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು ಎನ್ನಲಾಗಿದ್ದು, ಈ ಸಂಬಂಧ ವೆಂಕಟೇಶ್ ಪತ್ನಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಮಹಿಳಾ ಅಧಿಕಾರಿಯೋರ್ವರು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

ಯಶ್ ಮಾವನ ಮನೆಗೆ ಆಯುಕ್ತರು

ನಟ ಯಶ್ ಅವರ ಮಾವ ವಾಸವಾಗಿರುವ ಗಾಯತ್ರಿನಗರದ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರು ಭೇಟಿ ನೀಡಿ, ಕೆಲ ಕಾಲದ ನಂತರ ವಾಪಸ್ಸು ತೆರಳಿದರು ಎಂದು ತಿಳಿದುಬಂದಿದೆ.

‘ಕಪ್ಪು ಹಣ ಹೂಡಿಕೆ ಇಲ್ಲ’

ಶುಕ್ರವಾರ ಜೆಪಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಕೃಷ್ಣ ಅವರು, ಕನ್ನಡ ಚಿತ್ರರಂಗದಲ್ಲಿ ಯಾರೂ ಕಪ್ಪು ಹಣ ಹೂಡಿಕೆ ಮಾಡುತ್ತಿಲ್ಲ, ನಟ ಸುದೀಪ್ ಭೇಟಿಗೆ ತೆರಳಿದ್ದ ನನ್ನನ್ನು ಐಟಿ ಅಧಿಕಾರಿಗಳು ಯಾವುದೇ ಪ್ರಶ್ನೆ, ವಿಚಾರಣೆ ನಡೆಸಿಲ್ಲ. ಮನೆಯಲ್ಲಿ ಸುದೀಪ್ ಅವರು ಆತಂಕದಲ್ಲಿ ಇಲ್ಲ ಎಂದರು.

ಬಂದು ವಾಪಸ್ಸು ಹೋದರು

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹಿನ್ನಲೆ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಶುಕ್ರವಾರ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ನಿವಾಸಕ್ಕೆ ಬಂದು ವಾಪಸ್ಸು ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News