ಮಾಹಿತಿ ತಂತ್ರಜ್ಞಾನ: ಸಲಹೆ ನೀಡಲು ತಜ್ಞರ ಸಮಿತಿ ಅಗತ್ಯವಿದೆ; ಡಾ.ಚಂದ್ರಶೇಖರ ಕಂಬಾರ

Update: 2019-01-04 14:54 GMT

ಧಾರವಾಡ, ಜ.4: ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳಲ್ಲಿ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ರಾಜ್ಯ ಸರಕಾರಕ್ಕೆ ಸಲಹೆ ನೀಡುವ ಸಲುವಾಗಿ ಒಂದು ತಜ್ಞರ ಸಮಿತಿ ಮಾಡಬೇಕಾದ ಅಗತ್ಯವಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು, ಮಾಹಿತಿ ತಂತ್ರಜ್ಞಾನದ ಕುರಿತು ಸಲಹೆ ನೀಡುವ ಸಮಿತಿಗಳಲ್ಲಿ ಎಲ್ಲ ರೀತಿಯ ತಂತ್ರಜ್ಞರು, ತಜ್ಞರು ಹಾಗೂ ಅಧಿಕಾರಿ ವರ್ಗದವರು ಭಾಗಿಯಾಗಬೇಕು ಎಂದು ಹೇಳಿದರು.

ಒಂದು ಭಾಷೆಯು ಅಳಿವು ಹಾಗೂ ಉಳಿವು ಅದರ ಬಳಕೆ ಮೇಲೆ ನಿಂತಿರುತ್ತದೆ. ನಮ್ಮ ಸಮಾಜ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಕಂಪ್ಯೂಟರ್ ಮಯವಾಗಿಬಿಟ್ಟಿದೆ. ನಾವು ಕಂಪ್ಯೂಟರ್ ಕಾಲದಲ್ಲಿ, ಇಂಗ್ಲೀಷ್‍ನಷ್ಟು ಸರಳವಾಗಿ ಕನ್ನಡವನ್ನು ಬಳಕೆ ಮಾಡದಿದ್ದರೆ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ತನ್ನ ಅನುದಾನದಲ್ಲಿ ರೂಪಗೊಳ್ಳುತ್ತಿರುವ ತಂತ್ರಾಂಶಗಳ ಪರವಾನಿಗೆ ಯಾವ ರೀತಿ ಇರಬೇಕು ಎಂಬ ಸ್ಪಷ್ಟವಾದ ನಿಲುವು ಹೊಂದಿರಬೇಕು. ಕನ್ನಡದ ಶಿಷ್ಟತೆಯ ವಿಚಾರವನ್ನು ಯಾರು ನೋಡಿಕೊಳ್ಳಬೇಕು ಎಂದ ಅವರು, ಇ-ಗವರ್ನರ್ಸ್ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅದನ್ನು ನಿಯಂತ್ರಣ ಮಾಡಲಿದೆಯಾ ಎಂದು ಪ್ರಶ್ನಿಸಿದರು.

ಕೋಶಗಳ ರಚನೆ: ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲೀಷ್ ಪಠ್ಯವಾಗಲಿ ಆಯಾ ವರ್ಷಕ್ಕೆ ಪಠ್ಯವನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಅದಕ್ಕಾಗಿ ಕನ್ನಡ ವಿವಿ ಮುಂದೆ ಬರಬೇಕು ಹಾಗೂ ಪ್ರಕಟಿಸಬೇಕು. ಇದು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಬ್ಬರಿಗೂ ನೆರವಾಗುತ್ತದೆ. ವಿಜ್ಞಾನ ವಿಷಯದಲ್ಲಿ ಹೊಸ ಸಂಶೋಧನೆಗಳು, ಚಿಂತನೆಗಳು ಸತತವಾಗಿ ನಡೆಯುತ್ತಿರಬೇಕದರೆ ಓದಿ ತಿಳಿದ ಶಿಕ್ಷಕ ಮತ್ತು ವಿದ್ಯಾರ್ಥಿಗಳು ಸ್ವತಂತ್ರ, ಸೃಜನಶೀಲ ಸಂಶೋಧನೆಗಳನ್ನು ಮಾಡಲು ಅನುಕೂಲವಾಗುವಂತೆ ಕೋಶಗಳು ರಚನೆಯಾಗಬೇಕು ಎಂದು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News