×
Ad

ನಂಜನಗೂಡು: ಸಂಕ್ರಾಂತಿ ನಂತರ ಅಂಬೇಡ್ಕರ್ ಭವನ ಸಾರ್ವಜನಿಕರಿಗೆ ಲಭ್ಯ

Update: 2019-01-04 21:56 IST

ಮೈಸೂರು,ಜ.4: ಜಿಲ್ಲೆಯ ನಂಜನಗೂಡು ನಗರದಲ್ಲಿ ನಿರ್ಮಾಣಗೊಂಡಿದ್ದ ಅಂಬೇಡ್ಕರ್ ಸಮುದಾಯ ಭವನ ಸಂಕ್ರಾಂತಿ ಹಬ್ಬದ ನಂತರ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ನಿಲಾಖೆ ನಿರ್ದೇಶ ಜನಾರ್ಧನ್ ತಿಳಿಸಿದರು.

ನಿರ್ಮಾಣಗೊಂಡು ಮೂರು ವರ್ಷಗಳಾದರೂ, ಸಾರ್ವಜನಿಕರಿಗೆ ಲಭ್ಯವಾಗದ ಅಂಬೇಡ್ಕರ್ ಭವನ ಎಂಬ ಶೀರ್ಷಿಕೆಯಲ್ಲಿ “ವಾರ್ತಾಭಾರತಿ” ದಿನಪತ್ರಿಕೆಯಲ್ಲಿ ಡಿ.13 ರಂದು ಪ್ರಕಟಗೊಂಡಿದ್ದ ವರದಿ ತಾಲೂಕಿನಾದ್ಯಂತ ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ಅಂಬೇಡ್ಕರ್ ಭವನದಲ್ಲಿ ಬಾಕಿ ಉಳಿದಿದ್ದ ಕೆಲಸವನ್ನು ಪ್ರಾರಂಭಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಂಡು ಸಾರ್ವಜನಿಕರಿಗೆ ದೊರೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ. 

ಈಗಾಗಲೇ ಸಮದಾಯ ಭವನದ ರೂಮ್ ಗಳಿಗೆ ಮಂಚ, ಹಾಸಿಗೆ, ದಿಂಬು, ಬೆಡ್‍ಶೀಟ್‍ಗಳನ್ನು ಅಳವಡಿಸಲಾಗಿದ್ದು, ಬೀರು, ಕಿಟಕಿ ಸೇರಿದಂತೆ ಅಡುಗೆಗೆ ಬೇಕಾದ ಕೆಲವು ಪಾತ್ರೆಗಳನ್ನು ಖರೀದಿಸಲಾಗಿದೆ. ಇನ್ನೂ ಬಾಕಿ ಉಳಿದಿರುವ ಸಾಮಾಗ್ರಿಗಳನ್ನು ಆದಷ್ಟು ಬೇಗ ತಂದು ಕೆಲಸವನ್ನು ತುರ್ತಾಗಿ ಮುಗಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಶಾಸಕ ಹರ್ಷವರ್ಧನ್ ಕೂಡ ವಿಶೇಷ ಗಮನ ಹರಿಸಿದ್ದು, ಕೂಡಲೇ ಅಲ್ಲಿನ ಕೆಲಸ ಕಾರ್ಯಗಳನ್ನು ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದ್ದಾರೆ. ಹಾಗಾಗಿ ಕೆಲವು ದಿನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ದೊರೆಯಲಿದೆ ಎಂದು ತಿಳಿಸಿದರು.

ನಗರಸಭೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಅನುದಾನದಲ್ಲಿ 20 ಲಕ್ಷ ರೂ. ಟೆಂಡರ್ ಕರೆದಿದ್ದು, ಈಗಾಗಲೆ 15 ಲಕ್ಷ ರೂ ಗಳ ಕಡಿಮೆ ಟೆಂಡರ್ ನಡೆದಿದೆ. ಕೆಲಸ ಬಿರುಸಾಗಿ ನಡೆಯುತ್ತಿದ್ದು, ಇನ್ನೊಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಆಗಬೇಕಿರುವ ಬಾಕಿ ಕೆಲಸವನ್ನು ತುರ್ತಾಗಿ ಮಾಡಲಾಗುತ್ತಿದೆ. ಎಲ್ಲಾ ಕೆಲಸ ಮತ್ತು ಸಾಮಾಗ್ರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲಾಗುತ್ತಿದೆ. ಇನ್ನೇನು ಕೆಲವೆ ದಿನಗಳಲ್ಲಿ ಕೆಲಸ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
-ಜನಾರ್ಧನ್, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News