ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಚಂಪಾ
ಧಾರವಾಡ, ಜ.4: ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮ ಜಾರಿ ಕುರಿತಂತೆ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲ, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವುದರ ವಿರುದ್ಧವಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಉದ್ಘಾಟನೆ ಸಮಾರಂಭದಲ್ಲಿ ಮೊದಲು ಮಾತನಾಡಿದ ಚಂದ್ರಶೇಖರ ಪಾಟೀಲ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕನ್ನಡ ಕುರಿತು ಹಿರಿಯ ಸಾಹಿತಿಗಳು ನೀಡುತ್ತಿದ್ದ ಎಲ್ಲ ಸಲಹೆಗಳನ್ನು ಸ್ವೀಕರಿಸುತ್ತಿದ್ದರು. ಕುಮಾರಸ್ವಾಮಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ನೇತೃತ್ವ ವಹಿಸಿದ್ದಾರೆ. ಹೀಗಾಗಿ ಕನ್ನಡ ಭಾಷೆಯ ಉಳಿವಿಗೆ ಸಿದ್ದರಾಮಯ್ಯ ಸರಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಮೈತ್ರಿ ಸರಕಾರ ಮುಂದುವರೆಸಿಕೊಂಡು ಹೋಗುವುದು ಮೈತ್ರಿ ಸರಕಾರದ ಧರ್ವವಾಗಿದೆ. ಆದರೆ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಮೈತ್ರಿ ಧರ್ಮ ಪಾಲಿಸುತ್ತಿಲ್ಲವೆಂಬ ಅನುಮಾನ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆಯೇ ಇಂಗ್ಲಿಷ್ ಮಾಧ್ಯಮ ಜಾರಿ ಕುರಿತು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದರು. ಆಗ ಪ್ರಶ್ನಿಸಿದಾಗ ಕಣ್ತಪ್ಪಿನಿಂದ ಕನ್ನಡ ಬದಲು ಇಂಗ್ಲಿಷ್ ಎಂದು ಬಳಕೆಯಾಗಿದೆ ಎಂದಿದ್ದರು. ಆದರೆ, ಬೆಳಗಾವಿ ಅಧಿವೇಶನದಲ್ಲಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಕುರಿತು ಮಾತನಾಡಿದರು. ಹೀಗಾಗಿ ಭಾಷಾ ಮಾಧ್ಯಮ ಕುರಿತು ಕುಮಾರಸ್ವಾಮಿ ಈ ವೇದಿಕೆಯಿಂದ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದು, ಈಗ ಜೀವಂತವಾಗಿರುವ ಎಲ್ಲ ಹಿರಿಯ ಸಾಹಿತಿಗಳು ಸರಕಾರ ನಿರ್ಧಾರವನ್ನು ಟೀಕಿಸಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರು ಮರೆಯದಿರಲಿ. ಎಸ್.ಎಲ್.ಭೈರಪ್ಪ ಅವರೊಂದಿಗೆ ನನ್ನ ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ, ಈ ವಿಚಾರದಲ್ಲಿ ಅವರ ನಿರ್ಧಾರ ಸ್ವಾಗತಾರ್ಹ ಎಂದು ಅವರು ತಿಳಿಸಿದರು.
ಶತಮಾನಗಳ ಇತಿಹಾಸವಿರುವ ಕನ್ನಡ ಅಳಿಯದು ಎಂದು ಧೈರ್ಯದಿಂದ ಹೇಳುವ ಆಗಿಲ್ಲ. ಕನ್ನಡಕ್ಕೆ ಅಪಾಯ ಬಂದಿದೆ. ಸರಕಾರ ಯಾವುದೇ ಚರ್ಚೆ ಮಾಡದೆ ಮಾಧ್ಯಮ ವಿಚಾರ ನಿರ್ಧಾರ ಕೈಗೆತ್ತುಕೊಂಡಿದ್ದು ಆಘಾತವನ್ನುಂಟು ಮಾಡಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದೆ ಕಾರಣಕ್ಕೂ ಕನ್ನಡ ಭಾಷೆಗೆ ಕಂಟಕ ಪ್ರಾಯವಾಗುವಂತಹ ಯಾವುದೆ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಒತ್ತಾಯಿಸಿದರು.