ದಲಿತ ಸಮುದಾಯ ಕನ್ನಡ ಮಾಧ್ಯಮವನ್ನು ಬೆಂಬಲಿಸಬೇಕು: ಚಿಂತಕ ಕೆ.ಬಿ.ಸಿದ್ದಯ್ಯ

Update: 2019-01-04 17:49 GMT

ಧಾರವಾಡ,  ಜ.4: ದಲಿತತ್ವ ಎನ್ನುವ ಭಾವನೆ, ಚಿಂತನೆ ಹಾಗೂ ಅನುಭವ ಕನ್ನಡ ಭಾಷೆಯ ಅಸ್ಥಿತ್ವದಲ್ಲಿದೆ. ಹೀಗಾಗಿ ದಲಿತ ಸಮುದಾಯ ಕನ್ನಡ ಮಾಧ್ಯಮವನ್ನು ಬೆಂಬಲಿಸಬೇಕು ಎಂದು ಚಿಂತಕ ಕೆ.ಬಿ.ಸಿದ್ದಯ್ಯ ಅಭಿಪ್ರಾಯಿಸಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ದಲಿತ ಅಸ್ಮಿತೆ ಕುರಿತ ವಿಚಾರಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸರಕಾರಿ ಶಾಲೆಯಲ್ಲಿ ನೂರು ಇಂಗ್ಲಿಷ್ ಮಾಧ್ಯಮವನ್ನು ತೆರೆಯುವ ಬದಲು, ಸರಕಾರಿ ಶಾಲೆಗಳನ್ನೆ ಅಮೂಲಾಗ್ರವಾಗಿ ಅಭಿವೃದ್ಧಿಗೊಳಿಸಲಿ. ಯಾವುದೆ ಕಾರಣಕ್ಕೂ ಇಂಗ್ಲಿಷ್ ಮಾಧ್ಯಮವನ್ನು ತೆರೆಯುವುದು ಬೇಡವೆಂದು ಒತ್ತಾಯಿಸಿದರು.

ದಲಿತಪರ ಬುದ್ಧಿಜೀವಿಗಳನೆಸಿಕೊಂಡಿರುವ ಕೆಲವರು ದಲಿತ ಸಮುದಾಯದಲ್ಲಿ ಕನ್ನಡದ ಬಗ್ಗೆ ಅಸಡ್ಡೆ ಹಾಗೂ ಇಂಗ್ಲಿಷ್ ಬಗ್ಗೆ ವ್ಯಾಮೋಹ ಬರುವಂತೆ ಮಾತನಾಡುತ್ತಿದ್ದಾರೆ. ಇದು ದಲಿತತ್ವದ ಅಡಿಯಲ್ಲಿ ಚಿಂತಿಸುವ ಪರಿಯಲ್ಲ. ಕನ್ನಡ ಎಂಬುದು ಈ ನಾಡಿನ ಎಲ್ಲ ಜನವರ್ಗದ ಅಸ್ಮಿತೆಯ ಭಾಗವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬ್ರಾಹ್ಮಣರಿಗೆ ತನ್ನ ಜಾತಿಯ ಬಗ್ಗೆ ಹೇಳಿಕೊಳ್ಳಲು ಹಿಂಜರಿಯುವಂತೆ ಮಾಡುವುದೆ ನಿಜವಾದ ಜಾತಿ ವಿನಾಶಕಡೆಗೆ ಹೆಜ್ಜೆಯಾಗಿದೆ. ಇಂತಹ ವಾತಾವರಣವನ್ನು ನಿರ್ಮಿಸುವ ಕಡೆಗೆ ದಲಿತತ್ವ ರೂಪಿಸುವ ನಿಟ್ಟಿನಲ್ಲಿ ನಾವು ಚಲನಶೀಲರಾಗಬೇಕಿದೆ ಎಂದು ಅವರು ಹೇಳಿದರು.

ಇವತ್ತಿನ ಜಾಗತೀಕರದ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳು ದೇಶದಲ್ಲಿ ಜಾತಿಯೆ ಅಸ್ಥಿತ್ವದಲ್ಲಿರಲಿಲ್ಲ ಎಂಬ ರೀತಿಯ ಸಂಶೋಧನೆಗಳನ್ನು ನಡೆಸುತ್ತಿವೆ. ಇಂತಹ ಸವಾಲುಗಳಿಗೆ ದಲಿತತ್ವ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಅರಿಯುವ ದಾರಿಯಲ್ಲಿ ನಿರಂತರವಾಗಿ ಚಲನಶೀಲರಾಗಬೇಕು ಎಂದು ಅವರು ಹೇಳಿದರು. ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಮುತ್ಸದ್ಧಿ ಕೆ.ಬಿ.ಶಾಣಪ್ಪ ವಹಿಸಿದ್ದರು. ದಲಿತ ಹೋರಾಟಗಾರ ಗುರುಪ್ರಸಾದ್ ಕೆರೆಗೋಡು, ಪುಟ್ಟಯ್ಯ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News