ಫೆ.3 ರಂದು ಪಲ್ಸ್ ಪೋಲಿಯೋ
ಬೆಂಗಳೂರು, ಜ.4: ರಾಜ್ಯದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಫೆ.3ರಂದು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದ್ದಾರೆ.
ನಗರದ ಬಹುಮಹಡಿ ಕಟ್ಟಡದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ, ಪೋಲಿಯೋ ಟಾಸ್ಕ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 7 ವರ್ಷಗಳಿಂದ ಇಲ್ಲಿಯವರೆಗೂ ಯಾವುದೇ ಪೋಲಿಯೋ ಪ್ರಕರಣ ಭಾರತದಲ್ಲಿ ದಾಖಲಾಗಿಲ್ಲ. ಕೊನೆಯ ಪ್ರಕರಣ 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ದಾಖಲಾಗಿತ್ತು. ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಅಫ್ಫಾನಿಸ್ತಾನದಲ್ಲಿ ಪೋಲಿಯೋ ಪ್ರಕರಣ ಕಂಡು ಬಂದಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವುದನ್ನು ಮುಂದುವರಿಸಲಾಗಿದೆ ಹೇಳಿದರು.
ಪ್ರತಿ ಶಿಶುವಿಗೆ 5 ವರಸೆ ಒಪಿವಿ ಮತ್ತು 2 ವರಸೆ ಐಪಿವಿ ಲಸಿಕೆಗಳನ್ನು ಸರಕಾರದ ಲಸಿಕಾ ವೇಳಾಪಟ್ಟಿಯಂತೆ ನೀಡಲಾಗುತ್ತದೆ. ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಲಾಗಿದೆ. ಅಂದಾಜು 6.6 ಲಕ್ಷ ಮಕ್ಕಳಿಗೆ, 30 ಸಾವಿರ ಬೂತ್‌ಗಳಲ್ಲಿ, 60 ಸಾವಿರ ತಂಡಗಳ ಮೂಲಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 1.03 ಲಕ್ಷ ಲಸಿಕಾ ಕಾರ್ಯಕರ್ತರು, 6 ಸಾವಿರ ಮೇಲ್ವಿಚಾರಕರು, 1 ಸಾವಿರ ಸಂಚಾರಿ ತಂಡ ಹಾಗೂ 1737 ಟ್ರಾನ್ಸಿಟ್ ತಂಡಗಳನ್ನು ನೇಮಿಸಲಾಗಿದೆ ಎಂದು ನುಡಿದರು.
ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮವನ್ನು ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ವಾರ್ತಾ, ಕಾರ್ಮಿಕ, ಸಾರಿಗೆ ಹೀಗೆ ಹಲವು ಇಲಾಖೆಗಳ ಸಹಕಾರದೊಂದಿಗೆ ಈ ಲಸಿಕೆ ಕಾರ್ಯಕ್ರಮ ಯಶ್ವಸಿಗೊಳ್ಳಲಿದೆ ಎಂದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.