×
Ad

ಬಂಟ್ವಾಳದಲ್ಲಿ ಸಿಪಿಐ ಕಚೇರಿಗೆ ಬೆಂಕಿ: ಸಂಘಪರಿವಾರದ ವಿರುದ್ಧ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

Update: 2019-01-04 23:53 IST

ಚಿಕ್ಕಮಗಳೂರು, ಜ.4: ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಘಟನೆ ನೆಪ ಮಾಡಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷದ ಕಚೇರಿಗೆ ಬೆಂಕಿ ಇಟ್ಟು ಅಮೂಲ್ಯ ದಾಖಲೆಗಳನ್ನು ನಾಶ ಮಾಡಿದ ಸಂಘಪರಿವಾರದ ಕೃತ್ಯ ಖಂಡಿಸಿ ನಗರದಲ್ಲಿ ಸಿಪಿಐ ಪಕ್ಷ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ರೈತಸಂಘ, ಕೋಮು ಸೌಹಾರ್ದ ವೇದಿಕೆ, ಹಸಿರುಸೇನೆ, ಎಐವೈಎಫ್ ಮತ್ತಿತರ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡು ಸಿಪಿಐ ಕಚೇರಿಗೆ ಬೆಂಕಿ ಇಟ್ಟು ನಾಶ ಮಾಡಿದ ಸಂಘಪರಿವಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ಸಿಪಿಐ ಪಕ್ಷ ಮುಖಂಡ ಎಚ್.ಎಂ.ರೇಣುಕಾರಾಧ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈರುಧ್ಯ,  ವ್ಯತ್ಯಾಸಗಳು ಸಹಜ. ಇಂತಹ ವೈರುಧ್ಯಗಳ ಬಗ್ಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಮುಖಾಮುಖಿ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶ ಸಂವಿಧಾನದತ್ತವಾಗಿದೆ. ಆದರೆ ಕೋಮುವಾದದ ಮೂಲಕ ದೇಶಾದ್ಯಂತ ಭೀತಿ ಮೂಡಿಸಿ ಅಧಿಕಾರದ ಗದ್ದುಗೆ ಏರಲು ಹೊಂಚು ಹಾಕಲು ಪ್ರಯತ್ನಿಸುತ್ತಿರುವ ಸಂಘಪರಿವಾರ ಹಾಗೂ ಬಿಜೆಪಿ ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೇ ವಿಧ್ವಂಸಕ ಕೃತ್ಯ ಎಸಗುತ್ತಾ ನಾಡಿನ ಸೌಹಾರ್ದ, ಸಾಮರಸ್ಯಕ್ಕೆ ಕಂಟಕವಾಗಿದ್ದಾರೆ. ಬಂಟ್ವಾಳದಲ್ಲಿ ಕಮ್ಯೂನಿಷ್ಟ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚುವ ಮೂಲಕ ಸಂಘಪರಿವಾರದ ಕಾರ್ಯಕರ್ತರು, ಮುಖಂಡರು ರಣಹೇಡಿಗಳೆಂಬುದನ್ನು ನಿರೂಪಿಸಿದ್ದಾರೆಂದು ದೂರಿದರು.

ಶಬರಿಮಲೆ ವಿಚಾರವಾಗಿ ಕೇರಳ ಸರಕಾರ ಸುಪ್ರೀಂ ಕೋರ್ಟ್‍ನ ಆದೇಶವನ್ನು ಪಾಲಿಸುತ್ತಿದೆಯೇ ಹೊರತು ಕೇರಳ ಸರಕಾರವೇ ಕಾನೂನು ಮಾಡಿ ದೇವಾಲಯದೊಳಗೆ ಮಹಿಳೆಯರನ್ನು ಪ್ರವೇಶಿಸುವಂತೆ ಪ್ರೇರೇಪಿಸುತ್ತಿಲ್ಲ. ಆದರೆ ಸಂಘಪರಿವಾರದ ಮುಖಂಡರು ಅಪಪ್ರಚಾರದ ಮೂಲಕ ಕೇರಳ ಸರಕಾರದ ವಿರುದ್ಧ ಜನರನ್ನು ಎತ್ತಕಟ್ಟುತ್ತಿದೆ. ಈ ಹುನ್ನಾರದಲ್ಲಿ ಸಂಘಪರಿವಾರ ಮತ್ತು ಬಿಜೆಪಿ ಯಶ ಕಾಣಲು ಎಂದಿಗೂ ಸಾಧ್ಯವಿಲ್ಲ ಎಂದ ಅವರು, ಕೇರಳದ ಘಟನೆಯನ್ನು ನೆಪ ಮಾಡಿಕೊಂಡು ಬಂಟ್ವಾಳದಲ್ಲಿ ಪಕ್ಷದ ಕಚೇರಿಗೆ ಬೆಂಕಿ ಹಾಕಿ, ಬಡ ಕಾರ್ಮಿಕರ ದಾಖಲೆಪತ್ರಗಳನ್ನು ಸುಟ್ಟು ಹಾಕಿರುವುದು ಸಂಘಪರಿವಾರದ ಬಡವರು, ದಲಿತರು, ಕಾರ್ಮಿಕ ವಿರೋಧಿ ನೀತಿಗೆ ಕನ್ನಡಿಯಾಗಿದೆ. ಬೆಂಕಿ ಮೂಲಕ ಸಮಾಜ ಒಡೆಯುವ ಹುನ್ನಾರ ನಡೆಸಿರುವ ಸಂಘಪರಿವಾರದ ಕಿಡಿಗೇಡಿಗಳನ್ನು ಪೊಲೀಸರು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ರೇಣುಕಾರಾಧ್ಯ ಆಗ್ರಹಿಸಿದರು.

ಸಿಪಿಐ ಜಿಲ್ಲಾ ಮುಖಂಡರ ಅಮ್ಜದ್ ಮಾತನಾಡಿ, ಕೇರಳ ಸರಕಾರ ಕಮ್ಯೂನಿಷ್ಟ್ ಸರಕಾರವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರವಾಗಿರುವ ಸಂವಿಧಾನದ ಆಶಯಗಳಿಗನುಗುಣವಾಗಿ ಕಾರ್ಯ ನಿರ್ವಹಿಸುತ್ತಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲು ಹೊರಟ ಸರಕಾರದ ವಿರುದ್ಧ ಸಂಘಪರಿವಾರ ನಡೆಸುತ್ತಿರುವ ಅಹಿಂಸಾತ್ಮಕ ಗಲಭೆ ನ್ಯಾಯಾಲಯದ ವಿರುದ್ಧ ಮಾಡುತ್ತಿರುವ ಹೋರಾಟವಾಗಿದೆ. ಕೇರಳದಲ್ಲಿ ಸಂಘಪರಿವಾರ ಹಾಗೂ ಬಿಜೆಪಿಯ ಆಟ ನಡೆಯದ ಹತಾಶೆಯಿಂದ ಗಲಭೆ ಸೃಷ್ಟಿಸಲಾಗುತ್ತಿದೆ. ಇಂತಹ ಕಿಡಿಗೇಡಿ ಕೃತ್ಯದ ಮೂಲಕ ಅಮಾಯಕರ ಪ್ರಾಣದೊಂದಿಗೆ ಆಟವಾಡುತ್ತಿರುವ ಸಂಘಪರಿವಾರ ಹಾಗೂ ಬಿಜೆಪಿಗೆ ಕೇರಳಿಗರು ತಕ್ಕ ಪಾಠ ಕಲಿಸಲಿದ್ದಾರೆ. ಬಂಟ್ವಾಳದ ಕಮ್ಯೂನಿಷ್ಟ್ ಪಕ್ಷದ ಕಚೇರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಅಗತ್ಯ ಕ್ರಮವಹಿಸಬೇಕೆಂದರು. 

ರೈತಸಂಘದ ಗುರುಶಾಂತಪ್ಪ ಮಾತನಾಡಿ, ಸಂಘಪರಿವಾರ ಹಾಗೂ ಬಿಜೆಪಿ ದೇವರು, ಧರ್ಮ, ದೇವಾಲಯಗಳ ಹೆಸರಿನಲ್ಲಿ ಗಲಭೆ ಸೃಷ್ಟಿಸಿ ಅಧಿಕಾರಗಳಿಸುವ ಸಂಚು ರೂಪಿಸಿದ್ದಾರೆ. ಇದರ ಭಾಗವಾಗಿ ಕೇರಳದಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ದೇವಾಲಯಗಳನ್ನು ವ್ಯಾಪಾರೀಕರಣದ ಕೇಂದ್ರವನ್ನಾಗಿಸಿದ ಪರಿಣಾಮ ಶಬರಿಮಲೆ ದೇಗುಲದೊಳಗೆ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಪಡಿಸಲಾಗುತ್ತಿದೆ. ಈ ವಿಚಾರದಲ್ಲಿ ಗಲಭೆ ಸೃಷ್ಟಿಸುತ್ತಿರುವವರಲ್ಲಿ ಶಬರಿಮಲೆ ದೇಗುಲದ ಬಗ್ಗೆ ಗೌರವ, ಭಕ್ತಿ ಇಲ್ಲ. ರಾಜಕೀಯ ಲಾಭದ ಭಾಗದವಾಗಿ ದಂಗೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೋಮುಸೌಹಾರ್ದ ವೇದಿಕೆಯ ಗೌಸ್ ಮೊಹಿದ್ದೀನ್, ಹಸಿರುಸೇನೆಯ ಆರ್.ಆರ್.ಮಹೇಶ್ ಮತ್ತಿತರರು ಮಾತನಾಡಿದರು. ಬಳಿಕ ಬಂಟ್ವಾಳದಲ್ಲಿ ಸಿಪಿಐ ಕಚೇರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನುಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ವಿಜಯ್‍ಕುಮಾರ್, ರಘು, ರೈತಸಂಘದ ಕೃಷ್ಣೇಗೌಡ, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ, ಮಂಜುನಾಥ್, ಲೋಕೇಶ್, ಗುಣಶೇಖರ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News