ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಘೋಷಣೆ: ಸಿಎಂ ಕುಮಾರಸ್ವಾಮಿ

Update: 2019-01-05 12:41 GMT

ರಾಯಚೂರು, ಜ.5: ಪ್ರಸ್ತುತ ಸಾಲಿನ ಬಜೆಟ್ ಅನ್ನು ಫೆಬ್ರುವರಿಯಲ್ಲಿ ಮಂಡಿಸಲು ನಿರ್ಧರಿಸಿದ್ದು, ಇದರಲ್ಲಿ ಪ್ರಮುಖವಾಗಿ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಜಿಲ್ಲೆಯ ಸಿಂಧನೂರಿನಲ್ಲಿ ಇಂದಿನಿಂದ ಆರಂಭವಾದ ಮೂರು ದಿನಗಳ ರಾಜ್ಯಮಟ್ಟದ ಮತ್ಸ ಹಾಗೂ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡಲು ಇಲಾಖೆಗಳಿಗೆ ಕೊಡುವ ಅನುದಾನದಲ್ಲಿ ವ್ಯತ್ಯಾಸ ಮಾಡಿಲ್ಲ. ಸಾಲಮನ್ನಾ ಉದ್ದೇಶಕ್ಕಾಗಿ ಪ್ರತ್ಯೇಕ ಹಣ ತೆಗೆದಿರಿಸಲಾಗಿದೆ ಎಂದು ವಿವರಿಸಿದರು.

ನನಗೆ ನಾಡಿನ ರೈತರು, ಕೂಲಿ ಕಾರ್ಮಿಕರ ಪರಿಸ್ಥಿತಿ ಗೊತ್ತಿದೆ. ಭೂಮಿಯಿಲ್ಲದ ಕುಟುಂಬಕ್ಕೆ ಉದ್ಯೋಗ ಒದಗಿಸಬೇಕು ಎನ್ನುವ ಚಿಂತನೆಯೂ ಈಗಾಗಲೇ ಆರಂಭವಾಗಿದೆ. ಸ್ವಲ್ಪಸಮಯಾವಕಾಶ ನೀಡಿ, ಎಲ್ಲರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಕುಮಾರಸ್ವಾಮಿ ನುಡಿದರು.

ಕೊಪ್ಪಳದಲ್ಲಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಯಿತು. ಆತ್ಮಹತ್ಯೆಗೆ ಏನು ಕಾರಣ ಎಂಬುದರ ಕುರಿತು ಅಧಿಕಾರಿಗಳ ಮೂಲಕ ಕೂಡಲೇ ಮಾಹಿತಿ ಪಡೆದಿದ್ದೇನೆ. ಕೌಟುಂಬಿಕವಾಗಿ ಭೂಮಿ ಹಂಚಿಕೆ ವಿಷಯವಾಗಿ ಕಲಹ ಏರ್ಪಟ್ಟಿರುವುದು ಅವರ ಆತ್ಮಹತ್ಯೆಗೆ ಕಾರಣ. ಆದರೆ, ಅವರ ಆತ್ಮಹತ್ಯೆಗೆ ಸಾಲಬಾಧೆ ಕಾರಣ ಎಂದು ಮಾಧ್ಯಮದವರು ಕೊಡುತ್ತಿದ್ದಾರೆ. ದಯಮಾಡಿ ವಸ್ತುನಿಷ್ಠ ಸುದ್ದಿಗಳನ್ನು ಪ್ರಸಾರ ಮಾಡಬೇಕು ಎಂದು ಹೇಳಿದರು.

ಮೇಳದಲ್ಲಿ ಪ್ರಗತಿಪರ ರೈತರನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಸೇರಿದಂತೆ ಪ್ರಮುಖರಿದ್ದರು.

‘ಇಂಧನ ದರ ಏರಿಕೆ ಅನಿವಾರ್ಯ’

 ರಾಜ್ಯದಲ್ಲಿ ಇಂಧನ ದರ ಹೆಚ್ಚಳ ಅನಿವಾರ್ಯ. ದರ ಹೆಚ್ಚಳವಾಗಿದ್ದ ವೇಳೆ ಸೆಸ್ ಕಡಿಮೆ ಮಾಡಲಾಗಿತ್ತು. ಅಲ್ಲದೆ, ಬಸ್ ದರ ಹೆಚ್ಚಿಸಬೇಕೆನ್ನುವ ಪ್ರಸ್ತಾವ ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಇಂಧನ ತೆರಿಗೆ ಕಡಿಮೆ ಇದೆ

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News