ಸಂಸತ್ತಿಗೆ ಉತ್ತರಿಸಲು ಪ್ರಧಾನಿ ಮೋದಿ ಹಿಂದೇಟು: ಮಲ್ಲಿಕಾರ್ಜುನ ಖರ್ಗೆ

Update: 2019-01-05 14:18 GMT

ಕಲಬುರ್ಗಿ, ಜ.5: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಪ್ರಧಾನಿ ನರೇಂದ್ರಮೋದಿ ಸಂಸತ್ತಿಗೆ ಬಂದು ಯಾಕೆ ಉತ್ತರ ನೀಡುತ್ತಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿನ ಅಧಿವೇಶನದಲ್ಲಿ ರಫೇಲ್ ಒಪ್ಪಂದ ಕುರಿತು ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿದೆ. ಪ್ರಧಾನಿ ನರೇಂದ್ರಮೋದಿ ವಿರುದ್ಧವೇ ಎಲ್ಲ ಪ್ರತಿಪಕ್ಷಗಳು ನೇರವಾಗಿ ಆರೋಪ ಮಾಡುತ್ತಿವೆ ಎಂದರು.

ರಫೇಲ್ ಒಪ್ಪಂದ ಕುರಿತು ಜಂಟಿ ಸದನ ಸಮಿತಿ ರಚಿಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ, ನರೇಂದ್ರಮೋದಿ ಮಾತ್ರ ಸಂಸತ್ತಿಗೆ ಉತ್ತರಿಸಲು ಹಿಂದೇಟು ಹಾಕುತ್ತಿದ್ದಾರೆ. ಜಂಟಿ ಸದನ ಸಮಿತಿ ರಚನೆಗೆ ಒತ್ತಾಯಿಸಿ ಸಂಸತ್ತಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ಹೇಳಿದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಹಸ್ತಕ್ಷೇಪ ಮಾಡಿ, ಅದನ್ನು ದುರ್ಬಲಗೊಳಿಸಲಾಗಿದೆ. ಜನಪ್ರಿಯ ಯೋಜನೆಗಳಿಗೆ ಖರ್ಚು ಮಾಡಲು ಕೇಂದ್ರ ಸರಕಾರದ ಬಳಿ ಹಣ ಇಲ್ಲ. ಆದುದರಿಂದ, ಹೇಗಾದರೂ ಮಾಡಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ದೇಶದ ಜನತೆಗೆ ನೀಡಿದ ಯಾವ ಭರವಸೆಗಳು ಈಡೇರಿಲ್ಲ. ಎರಡು ಕೋಟಿ ಉದ್ಯೋಗ ಕೊಡುತ್ತೇವೆ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ.ಹಾಕುತ್ತೇವೆ ಎಂದರು. ಆದರೆ, ಅವರು ಭರವಸೆ ಈಡೇರಿಸದೆ ಇರುವುದನ್ನು ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ. ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರಮೋದಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿಂದ ಬಂದ ನಂತರ ಆ ದೇಶಗಳಲ್ಲಿ ಯಾವ ವಿಚಾರದ ಕುರಿತು ಚರ್ಚೆಗಳು ನಡೆದಿವೆ ಎಂಬ ಮಾಹಿತಿಯನ್ನು ಸಂಸತ್ತಿಗೆ ನೀಡುವುದಿಲ್ಲ. ಮೋದಿ ಸದನಕ್ಕೆ ಗೌರವ ಕೊಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಗಾರಿದರು.

ಸಂವಿಧಾನ ಬದ್ಧವಾಗಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಇವರಿಗೆ ನಂಬಿಕೆಯಿಲ್ಲ. ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News