ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಪ್ರಸ್ತಾಪ ಹಿಂಪಡೆಯಲು ಒಕ್ಕೊರಲಿನ ಒತ್ತಾಯ
ಧಾರವಾಡ, ಜ.5: ಸರಕಾರಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದೇ ಕನ್ನಡ ಮಾಧ್ಯಮ ಶಾಲೆಗಳು ಮಂಕಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂಬರುವ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಕನ್ನಡ ಮಾಧ್ಯಮ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿರ್ವತನೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಗೋಷ್ಠಿಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಅಂಬಿಕಾತನಯದತ್ತ ವೇದಿಕೆಯಲ್ಲಿ ನಡೆದ ‘ಕನ್ನಡ ಶಾಲೆಗಳ ಅಳಿವು-ಉಳಿವು’ ಗೋಷ್ಠಿಯಲ್ಲಿ ಮಾತನಾಡಿದ ಎಲ್ಲರೂ, ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರಯುವ ಸರಕಾರದ ನಿರ್ಧಾರವನ್ನು ಕೈಬಿಡಬೇಕು. ಶತಮಾನದ ಇತಿಹಾಸವಿರುವ ಕನ್ನಡದ ಶಾಲೆಗಳಿಗೆ ಅವುಗಳ ಅಭಿವೃದ್ದಿಗೆ ವಿಶೇಷ ಅನುದಾನ ನೀಡಬೇಕು. ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರೀಯವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಎಸ್. ಜಯದೇವ್, ಒಂದು ವಿಷಯವಾಗಿ ಬೋಧನೆ ಮಾಡುವುದು ಒಳಿತು. ಅದೇ ರೀತಿ, ಶತಮಾನೋತ್ಸವ ಪೂರೈಸಿದ ಶಾಲೆಗಳಿಗೆ ಮೂಲಸೌಕರ್ಯ ಸಮಸ್ಯೆ ಎದುರಾಗಿದೆ. ಈ ವಿಚಾರವಾಗಿ ಹಿಂದೆ ಜಿ.ಎಸ್. ಶಿವರುದ್ರಪ್ಪ ಅವರು ಸರಕಾರಕ್ಕೆ ಮನವಿ ಸಲ್ಲಿಸಿ, ಶಾಲೆಗಳನ್ನು ಸಮಗ್ರ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಜಾರಿ ಮಾಡುವ ಜತೆಗೆ ಶಾಲೆಗಳ ವಿಲೀನ ನಿರ್ಧಾರವನ್ನು ತಡೆ ಹಿಡಿದಿರುವುದಾಗಿ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಯಿತು.
ಆಂಗ್ಲ ಭಾಷೆಯ ಹುಚ್ಚು ವ್ಯಾಮೋಹ ಬೇಡ: ಪೋಷಕರಿಗೆ ಆಂಗ್ಲ ಭಾಷೆಯಲ್ಲಿ ಮಕ್ಕಳು ಕಲಿತರೆ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂಬ ತಪ್ಪು ಕಲ್ಪನೆಯಿದೆ. ಇದಕ್ಕೆ ಪೂರಕ ಎಂಬಂತೆ ನಮ್ಮ ಸರಕಾರಗಳು ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ದೇಶದ ಶೇ.44 ಜನಸಂಖ್ಯೆ ಮಕ್ಕಳಿಂದ ಆವೃತವಾಗಿದೆ. ಆದರೆ, ಆಯವ್ಯಯದಲ್ಲಿ ಮಕ್ಕಳ ಕಲ್ಯಾಣಕ್ಕೆ ಶೇ.4 ಅನುದಾನ ಇಡಲಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆ ಹೆಚ್ಚಿದಂತೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಏರುತ್ತಿರುವುದನ್ನು ಗಮನಿಸಬೇಕು ಎಂದರು.
ಅಧ್ಯಯನದ ಪ್ರಕಾರ ಒಂದು ಶಾಲೆಗೆ 100 ಮಕ್ಕಳು ಸೇರಿದರೆ ಎಸೆಸ್ಸೆಲ್ಸಿ ವೇಳೆಗೆ 300ಕ್ಕೆ ಇಳಿಕೆಯಾಗಿರುತ್ತದೆ. ಅದೇ ರೀತಿ, ಪಿಯುಸಿ ವೇಳೆಗೆ ಈ ಸಂಖ್ಯೆ 15 ಆಗಲಿದ್ದು, ಇದರಲ್ಲಿ 3ವಿದ್ಯಾರ್ಥಿಗಳು ಮಾತ್ರ ವಿಜ್ಞಾನ ಆಯ್ಕೆ ಮಾಡುಕೊಳ್ಳುತ್ತಿದ್ದಾರೆ. ಹೀಗಾಗಿ ಆಂಗ್ಲ ಭಾಷೆ ನಮಗೆ ಅನಿವಾರ್ಯವಲ್ಲ. ರಾಜ್ಯದ ಸರಕಾರಿ ಶಾಲೆಯಲ್ಲಿ ಶೇ.25 ಶಿಕ್ಷಕರ ಗೈರು, ಶೇ.56 ಶಿಕ್ಷಕರು ಹಾಜರಾಗಿಯೂ ಪಾಠ ಮಾಡದಿರುವುದು ಹಾಗೂ ಮೂಲಸೌಕರ್ಯದ ಕೊರತೆಯಿಂದ ಪಾಲಕರು ಸರಕಾರಿ ಶಾಲೆ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ, ಸಮಾನ ಶಿಕ್ಷಣ ಹಕ್ಕು ಕಾಯ್ದೆ ಸಹ ನಮ್ಮ ಶಾಲೆಗಳಿಗೆ ಕಂಠಕವಾಗಿದೆ ಎಂದು ಗೋಷ್ಠಿಯ ಅಧ್ಯಕ್ಷ ಪ್ರೊ.ಎಸ್. ಜಯದೇವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ನಡೆಗೆ ಅಸಮಧಾನ: ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಅದನ್ನು ಪೋಷಿಸಬೇಕೆಂಬ ಪ್ರಸ್ತಾಪ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಮುಂದಿದೆ. ಆದರೆ, ಈವರೆಗೂ ಕಸಾಪ ಅದನ್ನು ಸಾಧ್ಯಮಾಡದಿರುವುದು ವಿಪರ್ಯಾಸ ಎಂದು ಪ್ರೊ.ಜಿ.ಎಸ್. ಜಯದೇವ್ ಅಸಮಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಇನ್ನಾದರೂ ನಾಡು-ನುಡಿಯ ಹಿತದೃಷ್ಟಿಯಿಂದ ಶಾಲೆಗಳ ವಿಚಾರವಾಗಿ ನಡೆದುಕೊಳ್ಳಬೇಕೆಂದು ಕಿವಿಮಾತನ್ನು ಹೇಳಿದರು.