ಎಚ್‌ಎಎಲ್ ಕುರಿತು ರಕ್ಷಣಾ ಸಚಿವೆ ಹೇಳಿಕೆ ಖಂಡನಾರ್ಹ: ದಿನೇಶ್‌ ಗುಂಡೂರಾವ್

Update: 2019-01-05 14:28 GMT

ಬೆಂಗಳೂರು, ಜ.5: ಲೋಕಸಭೆಯಲ್ಲಿ ದೇಶದ ಪ್ರತಿಷ್ಠಿತ ಎಚ್‌ಎಎಲ್ ಸಂಸ್ಥೆ ಕುರಿತು ಕೇವಲವಾಗಿ ಮಾತನಾಡಿರುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಡೆ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿರುವ ಉತ್ತರ ಖಂಡನಾರ್ಹ ಎಂದರು.

ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಎಚ್‌ಎಎಲ್ ಸಂಸ್ಥೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲದೆ, ಭ್ರಷ್ಟ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಉತ್ತರವು ರಾಜ್ಯಕ್ಕೆ ಮಾಡಿದ ಅನ್ಯಾಯ. ಅಷ್ಟೇ ಅಲ್ಲ, ಅವರ ಹೇಳಿಕೆಯು ಸಾಕಷ್ಟು ಆತಂಕ, ಅನುಮಾನಗಳನ್ನು ಮೂಡಿಸಿದೆ ಎಂದು ದಿನೇಶ್‌ ಗುಂಡೂರಾವ್ ಕಿಡಿಗಾರಿದರು. 

ಎಚ್‌ಎಎಲ್‌ನಲ್ಲಿ ಯುದ್ಧ ವಿಮಾನಗಳ ತಯಾರಿಕೆ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಮಾತನಾಡಿರುವುದು, ನಮ್ಮ ರಾಜ್ಯಕ್ಕೆ ಅಷ್ಟೇ ಅಲ್ಲ, ದೇಶಕ್ಕೆ ಮಾಡಿದ ಅವಮಾನವಾಗಿದೆ. ರಫೇಲ್ ವಿಚಾರವಾಗಿ ಯಾವುದೇ ಸ್ಪಷ್ಟ ಉತ್ತರ ನೀಡದೆ, ಲೋಕಸಭೆಯಲ್ಲಿ ವಿಷಯಾಂತರ ಮಾಡಿದ್ದಾರೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡುವುದು ಸರಿಯಲ್ಲ. ಇದು ಬಹಳ ನೋವಿನ ವಿಚಾರ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಯುಪಿಎ ಸರಕಾರದ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ರಫೇಲ್ ಯುದ್ಧ ವಿಮಾನ ಎಚ್‌ಎಎಲ್‌ನಲ್ಲೇ ತಯಾರಾಗಬೇಕಿತ್ತು. ನಮ್ಮ ರಾಜ್ಯದ ಪ್ರತಿಭಾನ್ವಿತ ಯುವಕರಿಗೆ ಉದ್ಯೋಗಾವಕಾಶಗಳು ಸಿಗುತ್ತಿತ್ತು. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನದ ವಿನಿಮಯವಾಗುತ್ತಿತ್ತು ಅವರು ಹೇಳಿದರು.

ಎಚ್‌ಎಎಲ್ ಸಾಮರ್ಥ್ಯದ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಸಂಸ್ಥೆಯನ್ನೆ ಮುಚ್ಚಿಬಿಡಲಿ. ಎಚ್‌ಎಎಲ್‌ನಲ್ಲಿ ಸಾಲ ತೆಗೆದುಕೊಂಡು ಸಿಬ್ಬಂದಿಗಳಿಗೆ ವೇತನ ನೀಡುವ ಪರಿಸ್ಥಿತಿ ಬಂದಿದೆ. 29,035 ಸಿಬ್ಬಂದಿಗಳಿಗೆ ವೇತನ ನೀಡಲು ಒಂದು ಸಾವಿರ ಕೋಟಿ ರೂ.ಸಾಲವನ್ನು ಎಚ್‌ಎಎಲ್ ತೆಗೆದುಕೊಂಡಿದೆ ಎಂದು ಅವರು ತಿಳಿಸಿದರು.

2013-14ನೆ ಸಾಲಿನಲ್ಲಿ 15,014 ಕೋಟಿ ರೂ.ಆರ್ಥಿಕ ಸಂಗ್ರಹ ಹೊಂದಿದ್ದ ಎಚ್‌ಎಎಲ್, 2019ರಲ್ಲಿ ತನ್ನ ಸಿಬ್ಬಂದಿಗೆ ವೇತನ ನೀಡಲು ಸಾಲ ಪಡೆಯುವ ದುಸ್ಥಿತಿಗೆ ಬಂದಿದೆ. ಮಿಗ್-21ಎಸ್, ಮಿಗ್-27ಎಸ್, ಜಾಗ್ವರ್, ಸುಕೋಯ್-30ಎಸ್, ಡೋರ್‌ನಿಯರ್-228 ನಂತಹ ಯುದ್ಧ ವಿಮಾನಗಳನ್ನು ಸಿದ್ಧಪಡಿಸಿದ ಹೆಗ್ಗಳಿಕೆ ಎಚ್‌ಎಎಲ್ ಸಂಸ್ಥೆಗಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದರೆ, ಖಾಸಗಿ ಸಂಸ್ಥೆಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಿ, ಎಚ್‌ಎಎಲ್‌ಗೆ ಅದರ ಜವಾಬ್ದಾರಿ ನೀಡುತ್ತೇವೆ. ಯುಪಿಎ ಸರಕಾರದ ಅವಧಿಯಲ್ಲಿ ಈ ಒಪ್ಪಂದವು ಅಂತಿಮ ಹಂತದಲ್ಲಿದ್ದಾಗ, ಪ್ರಧಾನಿ ನರೇಂದ್ರಮೋದಿ ರಾತ್ರೋರಾತ್ರಿ ಬೇರೆ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು ಖಂಡನಾರ್ಹ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಧಾನ ಕಾರ್ಯದರ್ಶಿ ಘೋರ್ಪಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News